ನವದೆಹಲಿ: ಈ ಬಾಲಕನಿಗೆ ಬರೀ 5 ವರ್ಷ. ಹೆಸರು ಅರ್ಜುನ್ ಪ್ರಜಾಪತಿ. ಎಲ್ಲ ಮಕ್ಕಳು ಈ ವಯಸ್ಸಿನಲ್ಲಿ ಆಟಿಕೆಗಳು, ಮೊಬೈಲ್ ಗೇಮ್ಗಳು, ಕಥೆಗಳಲ್ಲಿ ಮುಳುಗಿದ್ದರೆ, ಭಾರತೀಯ ಮೂಲದ ಅರ್ಜುನ್ ಪ್ರಜಾಪತಿ ಗಣಿತದ ಜಟಿಲ ಸಿದ್ಧಾಂತಗಳು, ಬ್ಲ್ಯಾಕ್ ಹೋಲ್ಗಳು ಹಾಗೂ ಮಾನವ ತಳಿಶಾಸ್ತ್ರದ ಕುರಿತು ಯೋಚಿಸುತ್ತಿದ್ದಾನೆ. ಹುಟ್ಟಿನಿಂದಲೇ ಅಪಾರ ಕುತೂಹಲ ಮೈಗೂಡಿಸಿಕೊಂಡಿರುವ ಈ ಬಾಲಕ ಈಗಾಗಲೇ 3,000ಕ್ಕೂ ಹೆಚ್ಚು ವಿಜ್ಞಾನ, ಖಗೋಳಶಾಸ್ತ್ರ ಮತ್ತು ಇತಿಹಾಸದ ಪುಸ್ತಕಗಳನ್ನು ಓದಿ ಮುಗಿಸಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾನೆ. ವೈದ್ಯಕೀಯ ಮತ್ತು ಕಾನೂನು ಹಿನ್ನೆಲೆಯ ಪೋಷಕರ ಮಗನಾದ ಅರ್ಜುನ್, ಅತಿಯಾದ ಆಸಕ್ತಿ ಮತ್ತು ಕುತೂಹಲದಿಂದ ಜ್ಞಾನಾರ್ಜನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾನೆ.
ಅಪಾರ ಬುದ್ಧಿಮತ್ತೆ ಮತ್ತು ಜಾಗತಿಕ ಮನ್ನಣೆ
ನಾಲ್ಕು ವರ್ಷ ತುಂಬುವಷ್ಟರಲ್ಲೇ ಅರ್ಜುನ್ ತನ್ನ ಚುರುಕಾದ ಬುದ್ಧಿಮತ್ತೆಯಿಂದ ಜಾಗತಿಕ ಹಂತದ ‘ಮೆನ್ಸಾ’ (Mensa) ಮತ್ತು ‘ಇಂಟರ್ಟೆಲ್’ (Intertel) ಎಂಬ ಪ್ರತಿಷ್ಠಿತ ಹೈ-ಐಕ್ಯೂ ಸಂಸ್ಥೆಗಳಿಗೆ ಆಯ್ಕೆಯಾಗಿದ್ದಾನೆ. ಆತನ ಸ್ಟ್ಯಾನ್ಫೋರ್ಡ್-ಬಿನೆಟ್ ಕಾಗ್ನಿಟಿವ್ ಪರೀಕ್ಷೆಯ ಪ್ರಕಾರ, ಆತನ ಐಕ್ಯೂ ಮಟ್ಟ 141 ರಷ್ಟಿದ್ದು, ಇದು ಅತ್ಯಂತ ಅಪರೂಪದ ಪ್ರತಿಭಾವಂತ ಮಕ್ಕಳಲ್ಲಿ ಕಂಡುಬರುವ ಸಾಮರ್ಥ್ಯವಾಗಿದೆ. ಬಾಲಕನ ಈ ಅದ್ಭುತ ಸಾಧನೆಯನ್ನು ಮೆಚ್ಚಿ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಹಾಗೂ ಒಂಟಾರಿಯೊ ಪ್ರೀಮಿಯರ್ ಡೌಗ್ ಫೋರ್ಡ್ ಅವರು ವೈಯಕ್ತಿಕವಾಗಿ ಅಭಿನಂದನಾ ಪತ್ರಗಳನ್ನು ಕಳುಹಿಸಿದ್ದಾರೆ.
ನಿತ್ಯಜೀವನದಲ್ಲೂ ವಿಜ್ಞಾನದ ಅಳವಡಿಕೆ
ಬಾಲಕ ಅರ್ಜುನ್ ಕೇವಲ ಪುಸ್ತಕದ ಬದನೆಕಾಯಿ ಆಗಿರದೇ, ತಾನು ಓದಿದ ವೈಜ್ಞಾನಿಕ ವಿಷಯಗಳನ್ನು ದೈನಂದಿನ ಜೀವನಕ್ಕೆ ಸಮರ್ಥವಾಗಿ ಜೋಡಿಸುತ್ತಾನೆ. ಒಮ್ಮೆ ಶಾಲೆಯಲ್ಲಿ ಬಿದ್ದು ಮೊಣಕೈಗೆ ಏಟಾದಾಗ, ವೈದ್ಯರ ಬಳಿ ತೆರಳಿ “ಇದು ಸ್ನಾಯುವಿನ ನೋವೋ ಅಥವಾ ಮೂಳೆಯ ಸಮಸ್ಯೆಯೋ ತಿಳಿಯಲು ಎಕ್ಸ್-ರೇ ಮಾಡಿಸಬಹುದೇ?” ಎಂದು ಕೇಳಿ ವೈದ್ಯರನ್ನೇ ಅಚ್ಚರಿಗೊಳಿಸಿದ್ದ. ಅಂತೆಯೇ ರೋಗನಿರೋಧಕ ಶಕ್ತಿ, ಬಿಳಿ ರಕ್ತಕಣಗಳು ಮತ್ತು ವೈರಸ್ಗಳ ಕುರಿತು ಆತ ತನ್ನ ಪೋಷಕರೊಂದಿಗೆ ನಡೆಸುವ ಸಂಭಾಷಣೆಗಳು ಆತನ ಜ್ಞಾನದ ಆಳವನ್ನು ಬಿಂಬಿಸುತ್ತವೆ.
ಒತ್ತಡವಿಲ್ಲದ ಪಾಲನೆ ಮತ್ತು ಹೆತ್ತವರ ಕಳಕಳಿ
ಮಗನ ಅಪಾರ ಬುದ್ಧಿಮತ್ತೆಯ ಹೊರತಾಗಿಯೂ, ಆತನ ಪೋಷಕರಾದ ಡಾ. ವಿಶಾಲ್ ಪ್ರಜಾಪತಿ ಮತ್ತು ಮಹಿತಾ ಅವರಿಗೆ ಐಕ್ಯೂ ಅಂಕಗಳಿಗಿಂತ ಮಗನ ಬಾಲ್ಯ ಹಾಗೂ ಸಂತೋಷವೇ ಪ್ರಮುಖವಾಗಿದೆ. ಮಗನ ಮೇಲೆ ಯಾವುದೇ ಶೈಕ್ಷಣಿಕ ಒತ್ತಡ ಹೇರದೆ, ಆತನಿಗೆ ಇಷ್ಟವಾದ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಬೆಳೆಯಲು ಬಿಡುವುದೇ ತಮ್ಮ ಗುರಿ ಎಂದು ಅವರು ಹೇಳುತ್ತಾರೆ. 1 ರಿಂದ 20 ರವರೆಗಿನ ಮಗ್ಗಿಗಳು, ಗಣಿತದ ಕಷ್ಟಕರ ಲೆಕ್ಕಗಳು ಹಾಗೂ ಸಂಗೀತ, ವರ್ಣಚಿತ್ರ ಕಲೆಯಲ್ಲೂ ಆಸಕ್ತಿ ಹೊಂದಿರುವ ಅರ್ಜುನ್, ಇತರ ಸಾಮಾನ್ಯ ಮಕ್ಕಳಂತೆ ಆಟವಾಡುತ್ತಾ ತನ್ನದೇ ಆದ ವೇಗದಲ್ಲಿ ಪ್ರಪಂಚವನ್ನು ಅರ್ಥೈಸಿಕೊಳ್ಳುತ್ತಿದ್ದಾನೆ.



















