ಮೈಸೂರು ದಸರಾ ವೇಳೆ ದಲಿತ ಮಂತ್ರಿಗಳನ್ನು ತಡೆದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಇದು ಶಿಷ್ಟಾಚಾರದ ಉಲ್ಲಂಘನೆಯಲ್ಲ ಎಂದಿದ್ದಾರೆ.ಬದಲಿಗೆ ಅಸ್ಪೃಶ್ಯತೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಪೂಜಾ ಸ್ಥಳ ಅಪವಿತ್ರ ಆಗುತ್ತದೆ ಎಂಬ ಕಾರಣಕ್ಕೆ ದಲಿತ ಮಂತ್ರಿಗಳನ್ನು ಹೊರಗಡೆ ನಿಲ್ಲಿಸಲಾಗಿದ್ದು, ಕಾಂಗ್ರೆಸ್ನಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆ. ಕಾಂಗ್ರೆಸ್ ಸೆಕ್ಯುಲರ್ ಅನ್ನೋದನ್ನು ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಸಂವಿಧಾನ ಬದಲಿಸುತ್ತದೆ ಎಂದು ಸುಳ್ಳು ಹೇಳಿದ್ದ ಕಾಂಗ್ರೆಸ್, ತನ್ನ ಸ್ವಾರ್ಥಕ್ಕಾಗಿ ಹಲವು ಬಾರಿ ಸಂವಿಧಾನ ಬದಲಿಸಿದೆ. ಆದರೆ ವಾಜಪೇಯಿ ಅವರು ದಲಿತರಿಗೆ ಮೀಸಲಾತಿ ಕೊಡಲು ಸಂವಿಧಾನ ತಿದ್ದುಪಡಿ ಮಾಡಿದ್ದರು. ಬಿಜೆಪಿ, ಆರ್ ಎಸ್ ಎಸ್ ಹಾಗೂ ಮನುವಾದದ ಬಗ್ಗೆ ಮಾತನಾಡುವ ಬಿ.ಕೆ. ಹರಿಪ್ರಸಾದ್ ಇವತ್ತು ಯಾಕೆ ಬಾಯಿ ಮುಚ್ಚಿ ಕುಳಿತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಪೌರಕಾರ್ಮಿಕನ ಮಗನನ್ನು ಮಂತ್ರಿಯನ್ನಾಗಿ ಮಾಡಿ, ಪೌರಕಾರ್ಮಿಕನ ರೀತಿಯೇ ನಡೆಸಿಕೊಳ್ಳುತ್ತಿರುವುದು ಕಾಂಗ್ರೆಸ್ನ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ. ಮುಖ್ಯಮಂತ್ರಿ ಬಳಿಕ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಗೌರವ ಸಿಗಬೇಕಿತ್ತು. ಈ ಘಟನೆಯನ್ನು ಪೊಲೀಸ್ ಅಧಿಕಾರಿ ಮಾಡಿದ್ದಲ್ಲ, ಸರ್ಕಾರವೇ ಅಸ್ಪೃಶ್ಯತೆ ಆಚರಣೆ ಮಾಡುತ್ತಿದೆ ಎಂದು ಖಂಡಿಸಿದ್ದಾರೆ. ಇದೇ ವೇಳೆ ರಾಜ್ಯದ ಸ್ಟಿಂಗ್ ಆಪರೇಷನ್ ಹಾಗೂ ವಿಡಿಯೋ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಕೆಟ್ಟ ಸಂಸ್ಕೃತಿ ಮತ್ತು ಬ್ಲಾಕ್ಮೇಲ್ ರಾಜಕಾರಣವಾಗಿದ್ದು, ಹಿರಿಯ ವ್ಯಕ್ತಿ ಸಿದ್ದರಾಮಯ್ಯ ಅವರ ಮರ್ಯಾದೆ ತೆಗೆಯುವ ಕೆಲಸ ಮಾಡಲಾಗಿದೆ. ಹೀಗಾಗಿ ಈ ಬಗ್ಗೆ ಸಿಬಿಐ ಅಥವಾ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು ಎಂದು ಕಾರಜೋಳ ಒತ್ತಾಯಿಸಿದ್ದಾರೆ.














