ಬಾಗಲಗುಂಟೆ ಭೈರವೇಶ್ವರ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಅಣ್ಣ ತಂಗಿ ರಾತ್ರಿ ಇಡೀ ನಾಗರ ಹಾವಿನ ಮೇಲೆ ಮಲಗಿದ್ದಾರೆ. ರಾತ್ರಿ ಕಿಟಕಿ ಮೂಲಕ ರೂಮ್ ಒಳಗಡೆ ಬಂದಿದ್ದ ಸರ್ಪ, ಗಾಢ ನಿದ್ರೆಯಲ್ಲಿದ್ದ ಇವರ ಮೈಮೇಲೆ ಓಡಾಡಿದೆ. ಮಲಗಿದ್ದಾಗ ಏನೋ ಓಡಾಡಿದಂತಾಗಿದ್ದು, ಇಲಿ ಇರಬಹುದೆಂದು ನಿರ್ಲಕ್ಷಿಸಿ ಅಣ್ಣ ತಂಗಿ ನಿದ್ರೆಗೆ ಜಾರಿದ್ದಾರೆ.
ಆದರೆ ಬೆಳಿಗ್ಗೆ ಎದ್ದು ಹಾಸಿಗೆ ತೆಗೆಯುವಾಗ ದಿಂಬಿನ ಕೆಳಗಡೆ ನಾಗರ ಹಾವು ಮಲಗಿರುವುದು ಪತ್ತೆಯಾಗಿದ್ದು, ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಹಾವು ಕಂಡು ತಕ್ಷಣ ಉರಗ ಸಂರಕ್ಷಕ ನಾಗೇಂದ್ರ ಅವರಿಗೆ ಕರೆ ಮಾಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಹಾವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿದ್ದಾರೆ.


















