ಬೆಂಗಳೂರು: ಭಾರತೀಯ ಅಂಚೆ ಕಚೇರಿಯು (India Post) ದೇಶಾದ್ಯಂತ ಕೋಟ್ಯಂತರ ಗ್ರಾಹಕರಿಗೆ ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಉಳಿತಾಯ ಖಾತೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ಅಂಚೆ ಕಚೇರಿಯು ತನ್ನದೇ ಆದ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದೆ. ವಿಶೇಷವಾಗಿ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum Balance) ಎಷ್ಟು ಕಾಯ್ದುಕೊಳ್ಳಬೇಕು ಮತ್ತು ನಿಯಮಗಳನ್ನು ಮೀರಿದರೆ ವಿಧಿಸಲಾಗುವ ದಂಡದ ಕುರಿತು ಗ್ರಾಹಕರು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.
ಅಂಚೆ ಕಚೇರಿ ಉಳಿತಾಯ ಖಾತೆಯನ್ನು ಚೆಕ್ ಬುಕ್ (ಇಲ್ಲದೆ ತೆರೆಯಲು ಕನಿಷ್ಠ 500 ರೂಪಾಯಿಗಳನ್ನು ಠೇವಣಿ ಮಾಡಬೇಕು. ಆದರೆ, ನೀವು ಚೆಕ್ ಬುಕ್ ಸೌಲಭ್ಯವನ್ನು ಬಯಸಿದರೆ ಕನಿಷ್ಠ ಬ್ಯಾಲೆನ್ಸ್ ಮಿತಿಯು ಹೆಚ್ಚಿರುತ್ತದೆ. ಒಂದು ವೇಳೆ ಖಾತೆಯಲ್ಲಿ ನಿರ್ದಿಷ್ಟಪಡಿಸಿದ ಕನಿಷ್ಠ ಮೊತ್ತಕ್ಕಿಂತ ಕಡಿಮೆ ಹಣ ಉಳಿದರೆ, ಅಂಚೆ ಕಚೇರಿಯು ನಿರ್ವಹಣಾ ಶುಲ್ಕವನ್ನು ವಿಧಿಸುತ್ತದೆ. ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆಯಲ್ಲಿ ಕನಿಷ್ಠ ಬಾಕಿ ಇಲ್ಲದಿದ್ದರೆ, ಖಾತೆ ನಿರ್ವಹಣೆಗಾಗಿ ನಿರ್ದಿಷ್ಟ ದಂಡದ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.
ಸತತವಾಗಿ ಖಾತೆಯಲ್ಲಿ ಹಣವಿಲ್ಲದೆ ಅಥವಾ ಯಾವುದೇ ವಹಿವಾಟು ನಡೆಯದೆ ಇದ್ದರೆ ಅಂತಹ ಖಾತೆಗಳು ನಿಷ್ಕ್ರಿಯಗೊಳ್ಳುವ ಸಾಧ್ಯತೆಯಿರುತ್ತದೆ. ಆದ್ದರಿಂದ ಗ್ರಾಹಕರು ತಮ್ಮ ಉಳಿತಾಯ ಖಾತೆಗಳಲ್ಲಿ ನಿಯಮಿತವಾಗಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಮತ್ತು ಅನಗತ್ಯ ದಂಡದಿಂದ ಪಾರಾಗುವುದು ಉತ್ತಮ.
ಭಾರತೀಯ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಸೇರಿ ಹಲವು ಸಾರ್ವಜನಿಕ ವಲಯದ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ನಿಯಮವನ್ನು ರದ್ದುಗೊಳಿಸಿವೆ. ಅಂದರೆ, ಉಳಿತಾಯ ಖಾತೆಯಲ್ಲಿ ಹಣವಿಲ್ಲದಿದ್ದರೂ ಯಾವುದೇ ದಂಡ ವಿಧಿಸುವುದಿಲ್ಲ. ಆದರೆ, ಎಚ್.ಡಿ.ಎಫ್.ಸಿ, ಐಸಿಐಸಿಐ ಸೇರಿ ಹಲವು ಖಾಸಗಿ ಬ್ಯಾಂಕುಗಳಲ್ಲಿ 10 ಸಾವಿರ ರೂಪಾಯಿವರೆಗೆ ಕನಿಷ್ಠ ಠೇವಣಿ ಇರಿಸಬೇಕು ಎಂಬ ನಿಯಮವಿದೆ.
ಇದನ್ನೂ ಓದಿ:ಸೈಬರ್ ವಂಚಕರು ಹಣ ಎಗರಿಸಿದ ನಂತರ ಹೀಗೆ ಮಾಡಿದರೆ ರಿಫಂಡ್: ಇಲ್ಲಿದೆ ಮಾಹಿತಿ



















