ಉಧಂಪುರ್: ಜಮ್ಮುವಿನ ಉಧಂಪುರ್‌ನಲ್ಲಿ ಅತ್ಯಂತ ಕ್ರೂರ ಹಾಗೂ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಹೌಸಿಂಗ್ ಕಾಲೊನಿ ನಿವಾಸಿ ಸುಷ್ಮಾ ದೇವಿ (40) ಎಂಬ ಮಹಿಳೆಯ ಮೇಲೆ ಆಕೆಯ ಮಲಮಗನೇ ಡೀಸೆಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ್ದಾನೆ. ಕೇಶವ್ ವರ್ಮಾ ಎಂಬವರ ಪತ್ನಿಯಾಗಿರುವ ಸುಷ್ಮಾ ದೇವಿ ಅವರ ಮೇಲೆ ಅವರ ಮಲಮಗ ಮೋಕ್ಷ್ ವರ್ಮಾ ಈ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಮನೆಯೊಳಗೆ ಮೈಮೇಲೆ ಬೆಂಕಿ ಹತ್ತಿಕೊಂಡಿದ್ದರಿಂದ ಆಕೆ ಪ್ರಾಣಭಯದಿಂದ ಕಿರುಚಾಡುತ್ತಾ ಹೊರಗೆ ಓಡಿಬಂದಿದ್ದು, ತಕ್ಷಣವೇ ಎಚ್ಚೆತ್ತ ಅಕ್ಕಪಕ್ಕದ ನೆರೆಹೊರೆಯವರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು
ಘಟನೆಯಲ್ಲಿ ಶೇ.70ರಷ್ಟು ಗಂಭೀರವಾಗಿ ಸುಟ್ಟುಹೋಗಿದ್ದ ಸುಷ್ಮಾ ದೇವಿ ಅವರನ್ನು ಕುಟುಂಬ ಸದಸ್ಯರು ಕೂಡಲೇ ಉಧಂಪುರ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಹಿಳೆಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಆಸ್ಪತ್ರೆಗೆ ವರ್ಗಾಯಿಸಲಾಯಿತು. ದುರದೃಷ್ಟವಶಾತ್, ತೀವ್ರ ಸ್ವರೂಪದ ಗಾಯಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆರೋಪಿ ವಶಕ್ಕೆ, ವಿಡಿಯೋ ಸಾಕ್ಷ್ಯ ಲಭ್ಯ
ಈ ಸಂಪೂರ್ಣ ಕೃತ್ಯಕ್ಕೆ ಸಂಬಂಧಿಸಿದ ಆಘಾತಕಾರಿ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಮುಖ ಸಾಕ್ಷ್ಯವಾಗಿ ಪೊಲೀಸರ ಕೈ ಸೇರಿವೆ. ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗಿಳಿದ ಉಧಂಪುರ್ ಪೊಲೀಸರು ತಕ್ಷಣವೇ ಆರೋಪಿ ಮೋಕ್ಷ್ ವರ್ಮಾನನ್ನು ವಶಕ್ಕೆ ಪಡೆದಿದ್ದಾರೆ. ಮಲತಾಯಿಯ ಮೇಲೆಯೇ ಇಂತಹ ಘಾತಕ ದಾಳಿ ನಡೆಸಲು ನಿಖರವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆ ಮುಂದುವರಿದಿದೆ.
ಇದನ್ನೂ ಓದಿ:ದೆಹಲಿಯಲ್ಲಿ ಪ್ರಿಯಾಂಕಾ ವಾದ್ರಾ ಪುತ್ರ ರಾಯನ್ ಕಲಾಪ್ರದರ್ಶನ ವಿವಾದ: ಪ್ರತಿಭಟನಾ ಫೋಟೋಗಳಿಗೆ ನಿರ್ಬಂಧ!



















