ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಒಂದು ಪ್ರಮುಖ ಸುದ್ದಿಯಿದೆ. ರೈಲ್ವೆ ಮಂಡಳಿಯು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ‘ಸ್ಟೇಷನ್ ಮಾಸ್ಟರ್’ (Station Master) ಹುದ್ದೆಗಳಿಗೆ ಅರ್ಹರಾಗಲು ಇದ್ದ ಕನಿಷ್ಠ ವಯಸ್ಸಿನ ಮಿತಿಯನ್ನು 18 ವರ್ಷಗಳಿಂದ 20 ವರ್ಷಗಳಿಗೆ ಏರಿಕೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಈ ಹೊಸ ನಿಯಮವು ಅಕ್ಟೋಬರ್ 7ರಿಂದಲೇ ಜಾರಿಗೆ ಬಂದಿದೆ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. ಭಾರತೀಯ ರೈಲ್ವೆ ಎಶ್ಟಾಬ್ಲಿಶ್ ಮೆಂಟ್ ಕೈಪಿಡಿಗೆ (Indian Railway Establishment Manual) ತಿದ್ದುಪಡಿ ತರುವ ಮೂಲಕ ಬದಲಾವಣೆ ಮಾಡಲಾಗಿದೆ.
ವಯೋಮಿತಿ ಬದಲಾವಣೆಯ ವಿವರ
ಹಿಂದಿನ ನಿಯಮ: ಸ್ಟೇಷನ್ ಮಾಸ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷಗಳಾಗಿದ್ದು, ಗರಿಷ್ಠ ವಯೋಮಿತಿ 30 ವರ್ಷಗಳವರೆಗೆ ಇತ್ತು.
ನೂತನ ನಿಯಮ: ಈಗ ಕನಿಷ್ಠ ವಯಸ್ಸಿನ ಮಿತಿಯನ್ನು 20 ವರ್ಷಗಳಿಗೆ ಹೆಚ್ಚಿಸಲಾಗಿದೆ. ಆದರೆ ಗರಿಷ್ಠ ವಯೋಮಿತಿ 30 ವರ್ಷವಾಗಿಯೇ ಮುಂದುವರಿಯಲಿದೆ.
ಈ ತಿದ್ದುಪಡಿಗೆ ಕಾರಣವೇನು?
ಸ್ಟೇಷನ್ ಮಾಸ್ಟರ್ ಹುದ್ದೆಗೆ ನೇರ ನೇಮಕಾತಿಗಾಗಿ ವಿದ್ಯಾರ್ಹತೆಯು ಪದವಿ ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣ ಮುಗಿಸುವಷ್ಟರಲ್ಲಿ ಸಾಮಾನ್ಯವಾಗಿ 20 ವರ್ಷಗಳನ್ನು ತಲುಪುತ್ತಾರೆ ಅಥವಾ ದಾಟುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅಖಿಲ ಭಾರತ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್ (AISMA) ಸೇರಿದಂತೆ ಹಲವು ಸಂಘಟನೆಗಳು ಕನಿಷ್ಠ ವಯೋಮಿತಿಯನ್ನು ಹೆಚ್ಚಿಸುವಂತೆ ಬಹಳ ಹಿಂದಿನಿಂದಲೂ ಬೇಡಿಕೆ ಇಟ್ಟಿದ್ದವು. ಈ ಮನವಿಗೆ ಸ್ಪಂದಿಸಿರುವ ರೈಲ್ವೆ ಮಂಡಳಿಯು ಈ ತಿದ್ದುಪಡಿ ತಂದಿದೆ.
ಹೊಸ ಆದೇಶ ಜಾರಿಗೆ ಬರುವ ಮುನ್ನವೇ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಆರಂಭವಾಗಿರುವ ಹಳೆಯ ನೇಮಕಾತಿಗಳಿಗೆ ಈ ಹೊಸ ನಿಯಮ ಅನ್ವಯಿಸುವುದಿಲ್ಲ. ಅಂತಹ ಹುದ್ದೆಗಳ ಭರ್ತಿಯು ಹಿಂದಿನ ಹಳೆಯ ನಿಯಮಗಳ ಪ್ರಕಾರವೇ ನಡೆಯಲಿದೆ. ಮುಂಬರುವ ದಿನಗಳಲ್ಲಿ ಹೊರಡಿಸಲಿರುವ ಹೊಸ ಅಧಿಸೂಚನೆಗಳಿಗೆ ಮಾತ್ರ ಈ 20 ವರ್ಷಗಳ ಕನಿಷ್ಠ ವಯೋಮಿತಿ ನಿಯಮ ಅನ್ವಯಿಸಲಿದೆ. ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಪರಿಶೀಲಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.



















