ಕೋಲ್ಕತ್ತಾ: ನವರಾತ್ರಿಯ ಸಂಭ್ರಮದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಕರಾಳ ದುರಂತವೊಂದು ಸಂಭವಿಸಿದೆ. ರಾಜಧಾನಿ ಕೋಲ್ಕತ್ತಾದಲ್ಲಿ ಸಪ್ತಮಿಯ ಸಂಭ್ರಮದ ವೇಳೆ ನಡೆದ ಭೀಕರ ಕಾಲ್ತುಳಿತ ದುರಂತದಲ್ಲಿ 19 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೂಜಾ ಸಮಿತಿಯ ಪ್ರಮುಖರು ಹಾಗೂ ಖಾಸಗಿ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಶನಿವಾರ ರಾತ್ರಿ ಸುಮಾರು 7.40ರ ಸುಮಾರಿಗೆ ಚೋರ್ಬಗಾನ್ ದುರ್ಗಾ ಪೂಜಾ ಪೆಂಡಾಲ್ನಲ್ಲಿ ಈ ದುರಂತ ಸಂಭವಿಸಿದೆ. ಈ ಪೂಜಾ ಮಂಟಪದಲ್ಲಿ ಅಪಾರ ಜನಸಂದಣಿ ಸೇರಿತ್ತು. ಇದೇ ವೇಳೆ ಏಕಾಏಕಿ ಭಾರೀ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಲೌಡ್ಸ್ಪೀಕರ್ ಮೂಲಕ ಒಂದು ಘೋಷಣೆ ಕೂಗಲಾಯಿತು. ಜೊತೆಗೆ ಖಾಸಗಿ ಭದ್ರತಾ ಸಿಬ್ಬಂದಿ ಊದಿದ ಸೀಟಿ ಸದ್ದು ಜನರಲ್ಲಿ ಆತಂಕ ಮತ್ತು ಗೊಂದಲ ಉಂಟುಮಾಡಿದೆ. ಮುನ್ನುಗ್ಗಲು ಯತ್ನಿಸಿದ ಜನರಿಂದ ಉಂಟಾದ ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಮೃತರ ಪೈಕಿ 13 ಮಹಿಳೆಯರು ಮತ್ತು 1 ಮಗುವೂ ಸೇರಿದೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳಲ್ಲಿ ಚೋರ್ಬಗಾನ್ ದುರ್ಗಾ ಪೂಜಾ ಸಮಿತಿಯ ಕಾರ್ಯದರ್ಶಿ ರಾಜ್ ಕುಮಾರ್ ಸೆವ್ಡಾ, ಉಪಾಧ್ಯಕ್ಷ ಶಂತನು ದುಬೆ, ಬಿದುರು ರಚನೆಯ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ಬಿಪ್ಲಬ್ ಮುಖರ್ಜಿ, ಜನಸಂದಣಿ ನಿಯಂತ್ರಣದಲ್ಲಿದ್ದ ಕೌಶಿಕ್ ಸಹಾ ಹಾಗೂ ಪಿಂಟು ದೇಯ್ ಮತ್ತು ಖಾಸಗಿ ಭದ್ರತಾ ಉಸ್ತುವಾರಿಗಳಾದ ಸುಮನ್ ಚಕ್ರವರ್ತಿ ಹಾಗೂ ರಾಜೇಶ್ ಪಾಲ್ ಸೇರಿದ್ದಾರೆ.
ಅಧಿಕಾರಿಗಳ ಭೇಟಿ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಮುಖಂಡರು, ಜನರನ್ನು ನಿಯಂತ್ರಿಸುವಲ್ಲಿ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಯೋಜಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೆಂಡಾಲ್ಗಳಲ್ಲಿ ಥೀಮ್ ಹೆಸರಿನಲ್ಲಿ ಮಂದ ಬೆಳಕು ಹಾಗೂ ಕಿರಿದಾದ ಪ್ರವೇಶ-ನಿರ್ಗಮನ ದ್ವಾರಗಳನ್ನು ಮಾಡುವುದನ್ನು ನಿಲ್ಲಿಸಬೇಕು. “ಯಾವುದೇ ಥೀಮ್ಗಳಿಗಿಂತ ಜನರ ಜೀವವೇ ಅತ್ಯಂತ ಬೆಲೆಬಾಳುವಂಥದ್ದು” ಎಂದು ಎಚ್ಚರಿಕೆ ನೀಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಪ್ರಮುಖ ಪೆಂಡಾಲ್ಗಳು ಬಂದ್
ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಭರ್ಜರಿ ದುರ್ಗಾ ಪೂಜೆಗಳ ಸಂದರ್ಭದಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಹಲವು ಪ್ರಮುಖ ಪೂಜಾ ಮಂಟಪಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ. ‘ತಲಾ ಪ್ರತ್ಯಯ್’, ‘ಅಲಿಪೋರ್ ಸರ್ವಜನೀನ್’, ‘ಚೆಟ್ಲಾ ಅಗ್ರಣಿ’ ಮತ್ತು ‘ಬಲ್ಲೀಗುಂಗೆ ಸರ್ವಜನೀನ್’ ಸೇರಿದಂತೆ ಪ್ರಮುಖ ಹಾಗೂ ಜನರನ್ನು ಆಕರ್ಷಿಸುವ ಪೆಂಡಾಲ್ಗಳಿಗೆ ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ದುರಂತದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರದ್ದೂ ಸೇರಿದಂತೆ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.



















