ಮೈಸೂರು: ರೈತ ದಸರಾದಲ್ಲಿ ಸ್ಥಳೀಯ ಹಳ್ಳಿಕಾರ್ ತಳಿಗಳನ್ನು ಕಡೆಗಣಿಸಲಾಗಿದೆ ಹಾಗೂ ಹಳ್ಳಿಕಾರ್ ಸಂತೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಆರೋಪಿಸಿ ರೈತರು ರಸ್ತೆ ತಡೆದು ಭಾರಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯಲ್ಲೇ ಹಳ್ಳಿಕಾರ್ ಹಸುಗಳನ್ನು ನಿಲ್ಲಿಸಿಕೊಂಡು ಸಚಿವರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರಿಗಳು ತಮ್ಮತ್ತ ತಿರುಗಿಯೂ ನೋಡುತ್ತಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.
ಕಂಬಳದ ಕೋಣಗಳಿಗೆ 16 ಗ್ರಾಂ ಚಿನ್ನದ ಬಹುಮಾನ, ಟ್ರಾನ್ಸ್ಪೋರ್ಟ್ಗೆ 60 ಸಾವಿರ ರೂ., ಎಸಿ ರೂಮ್ ಹಾಗೂ ಉತ್ತಮ ಆಹಾರ ನೀಡಿ ರಾಜಾತಿಥ್ಯ ವಹಿಸಲಾಗಿದೆ. ಆದರೆ ರೈತರ ಜೀವನಾಡಿಯಾದ ಸ್ಥಳೀಯ ಹಳ್ಳಿಕಾರ್ ಹಸುಗಳಿಗೆ ಯಾವುದೇ ಸೌಕರ್ಯ ನೀಡಿಲ್ಲ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



















