ನವದೆಹಲಿ: ರಷ್ಯಾ ಜೊತೆ ವ್ಯಾಪಾರ ಸಂಬಂಧ ಹೊಂದಿದ್ದ ಭಾರತ, ಚೀನಾ ಸೇರಿದಂತೆ ಹಲವು ದೇಶಗಳಿಗೆ ಬೃಹತ್ ರಾಜತಾಂತ್ರಿಕ ಹಾಗೂ ಆರ್ಥಿಕ ರಿಲೀಫ್ ದೊರೆತಿದೆ. ರಷ್ಯಾ ರಫ್ತಿಗೆ ಸಂಬಂಧಿಸಿದಂತೆ ಜಾರಿಯಾಗಬೇಕಿದ್ದ ಕಠಿಣ ನಿರ್ಬಂಧಗಳು ಮತ್ತು ಭಾರಿ ಆಮದು ಸುಂಕಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ತಡೆ ನೀಡಿದ್ದಾರೆ. ಅಮೆರಿಕವು ಕಳೆದ ತಿಂಗಳು ಅನುಮೋದಿಸಿದ್ದ ಕಾಯ್ದೆಯಡಿ ಶೇ.100ರಷ್ಟು ಸುಂಕ ಜಾರಿಯಾಗಲು ಕೇವಲ ಒಂದು ದಿನ ಬಾಕಿ ಇರುವಾಗಲೇ, ‘ರಾಷ್ಟ್ರೀಯ ಹಿತಾಸಕ್ತಿ’ಯ ಕಾರಣ ನೀಡಿ ಟ್ರಂಪ್ ಈ ನಿರ್ಬಂಧಗಳನ್ನು ಅಮಾನತಿನಲ್ಲಿಡುವ ಕಾರ್ಯಾಂಗ ಆದೇಶಕ್ಕೆ ಅಂಕಿತ ಹಾಕಿದ್ದಾರೆ.
ಅಮೆರಿಕದ ‘ಲಿಂಡ್ಸೆ ಗ್ರಹಾಮ್’ ಕಾಯ್ದೆ
ಉಕ್ರೇನ್ ಬೆಂಬಲಿಗರಾಗಿದ್ದ ದಿವಂಗತ ಸೆನೆಟರ್ ಲಿಂಡ್ಸೆ ಗ್ರಾಹಮ್ ಅವರ ಹೆಸರಿನಲ್ಲಿದ್ದ ‘ಲಿಂಡ್ಸೆ ಒ ಗ್ರಾಹಮ್ ಸಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ 2026’ ಕಾಯ್ದೆಗೆ ಟ್ರಂಪ್ ಕಳೆದ ತಿಂಗಳು ಸಹಿ ಹಾಕಿದ್ದರು. ರಷ್ಯಾದ ಯುದ್ಧ ನಿಧಿಗೆ ತಡೆ ಒಡ್ಡುವ ಉದ್ದೇಶ ಹೊಂದಿದ್ದ ಈ ಶಾಸನವು, ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಪ್ರಮುಖ ಐದು ದೇಶಗಳಾದ ಭಾರತ, ಚೀನಾ, ಸ್ಲೊವಾಕಿಯಾ, ಹಂಗೇರಿ ಮತ್ತು ಅಜರ್ಬೈಜಾನ್ ದೇಶಗಳ ಮೇಲೆ ಶೇ. 100 ರಷ್ಟು ತೆರಿಗೆ ಹಾಗೂ ರಷ್ಯಾದ ಇಂಧನ ಉತ್ಪನ್ನಗಳ ಮೇಲೆ ಶೇ. 500ರಷ್ಟು ಆಮದು ಸುಂಕ ವಿಧಿಸಲು ಟ್ರಂಪ್ಗೆ 30 ದಿನಗಳ ಗಡುವು ನೀಡಿತ್ತು. ಅಕ್ಟೋಬರ್ 18 ರಂದು ಈ ಗಡುವು ಮುಕ್ತಾಯಗೊಳ್ಳಲಿದ್ದು, ಈಗ ಟ್ರಂಪ್ ಹೊರಡಿಸಿರುವ ವಿನಾಯಿತಿ ಆದೇಶದಿಂದ ಭಾರತ ಆರ್ಥಿಕ ಆಘಾತದಿಂದ ಪಾರಾಗಿದೆ.
ಭಾರತದ ಸ್ಪಷ್ಟ ನಿಲುವು
ಈ ಶಾಸನ ಜಾರಿಯಾದಾಗಲೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಸಚಿವಾಲಯ, ತನ್ನ 140 ಕೋಟಿ ಜನಸಂಖ್ಯೆಯ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಜಾಗತಿಕ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ತೈಲ ಖರೀದಿಸುವುದು ತಡೆಯಲಾಗದ ನಿರ್ಧಾರ ಎಂದು ಸ್ಪಷ್ಟಪಡಿಸಿತ್ತು. ಅಮೆರಿಕದ ಪ್ರಮುಖ ನಾಯಕರೊಂದಿಗಿನ ಮಾತುಕತೆಯಲ್ಲಿ ಭಾರತ ತನ್ನ ನಿಲುವನ್ನು ಬಲವಾಗಿ ಪ್ರತಿಪಾದಿಸಿತ್ತು. ಈಗಿನ್ನೂ ಅಮೆರಿಕ ವಿಧಿಸುತ್ತಿದ್ದ ಹೆಚ್ಚುವರಿ ಸುಂಕದ ಬೆದರಿಕೆ ಶಮನಗೊಂಡಿರುವುದು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳಿಗೆ ಹೊಸ ಬಲ ನೀಡಿದೆ.
ರಷ್ಯಾದೊಂದಿಗೆ ಟ್ರಂಪ್ ಆಪ್ತತೆ, ಬದಲಾದ ರಾಜತಾಂತ್ರಿಕತೆ:
ಇತ್ತೀಚಿನ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಹೆಚ್ಚಿನ ಬಾಂಧವ್ಯ ಪ್ರದರ್ಶಿಸುತ್ತಿರುವುದು ಈ ಆದೇಶದ ಹಿನ್ನೆಲೆಯಾಗಿದೆ. ಇತ್ತೀಚೆಗೆ ರಷ್ಯಾದಿಂದ ಅಮೆರಿಕಕ್ಕೆ ಭಾರಿ ಪ್ರಮಾಣದ ಡೀಸೆಲ್ ಆಮದು ಮಾಡಿಕೊಳ್ಳುವ ಒಪ್ಪಂದಕ್ಕೂ ಟ್ರಂಪ್ ಚಾಲನೆ ನೀಡಿದ್ದರು. ಮತ್ತೊಂದೆಡೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸಿರುವ ಟ್ರಂಪ್, ಯುದ್ಧಕ್ಕೆ ಅಂತ್ಯಹಾಡಲು ಉಕ್ರೇನ್ಗೆ ಹೊಸ ನಾಯಕನ ಅಗತ್ಯವಿದೆ ಎಂದು ಹೇಳಿಕೆ ನೀಡಿರುವುದು ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಇದನ್ನೂ ಓದಿ:ಸುಪ್ರೀಂ ಕೋರ್ಟಿನಲ್ಲಿ 250 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ಹೀಗೆ ಅರ್ಜಿ ಸಲ್ಲಿಸಿ



















