ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಚಿನ್ನದ ಮೇಲೆ ಸಾಲ ಪಡೆಯುವವರ ಸಂಖ್ಯೆ ಶೇ.69ರಷ್ಟು ಜಾಸ್ತಿಯಾಗಿದೆ ಎಂದು ವರದಿಗಳು ತಿಳಿಸಿವೆ. ಅಗತ್ಯ ಬಿದ್ದಾಗ ಹೆಚ್ಚಿನ ಜನ ಚಿನ್ನದ ಮೇಲೆ ಸಾಲ ಪಡೆಯುತ್ತಾರೆ. ಇನ್ನೂ ಕೆಲವರು ಬ್ಯಾಂಕ್ ಗಳಲ್ಲಿ ಸಾಲ ಪಡೆಯುತ್ತಾರೆ. ಆದರೆ, ಯಾವ ರೀತಿಯ ಸಾಲ ಪಡೆಯುವುದು ಒಳಿತು? ಅದರಲ್ಲೂ, ಚಿನ್ನದ ಮೇಲೆ ಸಾಲ ಪಡೆಯುವುದರಿಂದ ಏನೆಲ್ಲ ಉಪಯೋಗಗಳಿವೆ ಎಂಬುದನ್ನು ತಿಳಿಯೋಣ ಬನ್ನಿ.
ಕಡಿಮೆ ಬಡ್ಡಿದರ: ವೈಯಕ್ತಿಕ ಸಾಲಗಳಿಗೆ (Personal Loan) ಹೋಲಿಸಿದರೆ ಚಿನ್ನದ ಸಾಲಕ್ಕೆ ಬಡ್ಡಿದರ ಕಡಿಮೆ ಇರುತ್ತದೆ. ಚಿನ್ನವು ಅಡಮಾನ ರೂಪದಲ್ಲಿ ಬ್ಯಾಂಕ್ ಬಳಿ ಭದ್ರವಾಗಿರುವುದರಿಂದ ಬಡ್ಡಿ ದರದಲ್ಲಿ ಸಡಿಲಿಕೆ ಸಿಗುತ್ತದೆ.
ಕಡಿಮೆ ದಾಖಲೆಗಳ ಅಗತ್ಯ: ವೈಯಕ್ತಿಕ ಸಾಲ ಅಥವಾ ಉದ್ಯಮ ಸಾಲ ಪಡೆಯಲು ಆದಾಯದ ಸಾಕ್ಷಿ, ಐಟಿ ರಿಟರ್ನ್ಸ್ ಅಥವಾ ಸಂಬಳದ ಸ್ಲಿಪ್ ಬೇಕು. ಆದರೆ ಚಿನ್ನದ ಸಾಲಕ್ಕೆ ನಿಮ್ಮ ಗುರುತಿನ ಚೀಟಿ ಮತ್ತು ವಿಳಾಸದ ಸಾಕ್ಷಿ ಇದ್ದರೆ ಸಾಕು.
ಸಿಬಿಲ್ ಸ್ಕೋರ್ ಅಗತ್ಯವಿಲ್ಲ: ನಿಮ್ಮ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೂ ಚಿನ್ನದ ಸಾಲ ಸುಲಭವಾಗಿ ಸಿಗುತ್ತದೆ. ಬ್ಯಾಂಕ್ ಗಳು ಗ್ರಾಹಕರ ಸಿಬಿಲ್ ಸ್ಕೋರ್ ಗಿಂತ ಚಿನ್ನದ ಮೌಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ.
ಕ್ಷಿಪ್ರವಾಗಿ ಸಾಲ ನೀಡುವುದು: ತುರ್ತು ಸಂದರ್ಭಗಳಲ್ಲಿ ಕೆಲವೇ ಗಂಟೆಗಳಲ್ಲಿ ಸಾಲದ ಹಣ ನಿಮ್ಮ ಕೈ ತಲುಪುತ್ತದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಹೋಗಿ ಚಿನ್ನದ ಶುದ್ಧತೆ ತಪಾಸಣೆ ಮುಗಿದ ತಕ್ಷಣ ಸಾಲದ ಮೊತ್ತ ಮಂಜೂರಾಗುತ್ತದೆ.
ಮರುಪಾವತಿಯಲ್ಲಿ ಸಡಿಲಿಕೆ: ಇದರಲ್ಲಿ ಮಾಸಿಕ ಕಂತುಗಳಷ್ಟೇ ಅಲ್ಲದೆ, ಸಾಲದ ಅವಧಿ ಮುಗಿಯುವವರೆಗೆ ಕೇವಲ ಬಡ್ಡಿಯನ್ನು ಮಾತ್ರ ಪಾವತಿಸಿ, ಕೊನೆಯಲ್ಲಿ ಅಸಲನ್ನು ತೀರಿಸುವ ‘ಬುಲೆಟ್ ರಿಪೇಮೆಂಟ್ ನಂತಹ ಸಡಿಲಿಕೆ ಇರುತ್ತದೆ.
ಸುರಕ್ಷಿತ ಸಂಗ್ರಹಣೆ: ಮನೆಯಲ್ಲಿ ಚಿನ್ನವನ್ನು ಇಟ್ಟುಕೊಂಡು ಕಳ್ಳತನದ ಭಯ ಪಡುವ ಬದಲು, ಬ್ಯಾಂಕ್ ಲಾಕರ್ ಗಳಲ್ಲಿ ಅದನ್ನು ಅತ್ಯಂತ ಸುರಕ್ಷಿತವಾಗಿಡಬಹುದು. ಸಾಲ ತೀರಿಸಿದ ತಕ್ಷಣ ನಿಮ್ಮ ಚಿನ್ನವನ್ನು ಸುರಕ್ಷಿತವಾಗಿ ಮರಳಿ ಪಡೆಯಬಹುದು.
ಇದನ್ನೂ ಓದಿ:ಕೇಂದ್ರ ಸರ್ಕಾರದ SMOI ಸಂಸ್ಥೆಯಲ್ಲಿ 8 ಹುದ್ದೆಗಳ ನೇಮಕಾತಿ: ಬೆಂಗಳೂರಿನಲ್ಲೇ ಕೆಲಸ!



















