ಲಖನೌ: ಭಾರತ ತಂಡದ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ ತಮ್ಮ ಫಿಟ್‌ನೆಸ್ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಹಾಗೂ ಟೀಕೆಗಳಿಗೆ ಬೌಲಿಂಗ್ ಮೂಲಕವೇ ದಿಟ್ಟ ಉತ್ತರ ನೀಡಿದ್ದಾರೆ. 2026-27ನೇ ಸಾಲಿನ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಬಂಗಾಳ ತಂಡದ ಪರ ಕಣಕ್ಕಿಳಿದಿರುವ ಶಮಿ, ಡೆಲ್ಲಿ ವಿರುದ್ಧ ಕಲ್ಯಾಣಿಯಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ಫಿಟ್‌ನೆಸ್ ಮತ್ತು ಲಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದವರ ಬಾಯಿ ಮುಚ್ಚಿಸಿದ್ದಾರೆ.ದೆಹಲಿ ವಿರುದ್ಧದ ಮೊದಲ ದಿನದ ಆಟದಲ್ಲಿ ಶಮಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೀಕಾಕಾರರಿಗೆ ನೇರವಾಗಿಯೇ ತಿರುಗೇಟು ನೀಡಿದ್ದಾರೆ. ತಮ್ಮ ಫಿಟ್‌ನೆಸ್ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವವರಿಗೆ ಏನು ಹೇಳುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಮಿ, “ನಾನು ಹೇಗಿದ್ದೇನೆ ಎಂಬುದು ನಿಮ್ಮ ಕಣ್ಣ ಮುಂದೆಯೇ ಇದೆ. ಅದನ್ನು ನೋಡಿ ನೀವು ಬರೆಯಬಹುದು, ಅದು ನಿಮ್ಮ ಕೆಲಸ. ನಾನು ಹೇಳುವುದರಿಂದ ಏನೂ ಆಗುವುದಿಲ್ಲ. ನಾನು ಮೈದಾನದಲ್ಲಿದ್ದೇನೆ, ಆಡುತ್ತಿದ್ದೇನೆ. ನನಗೆ ಎಲ್ಲಿ ಆಡಲು ಸಾಧ್ಯವೋ ಅಲ್ಲಿ ಆಡುತ್ತೇನೆ. ಕೇವಲ ಬೌಲಿಂಗ್ ಮಾಡುವುದು ಮಾತ್ರ ನನ್ನ ಕೆಲಸ,” ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಶಮಿ ಮಾರಕ ದಾಳಿಗೆ ದೆಹಲಿ ತತ್ತರ
36 ವರ್ಷದ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಕೇವಲ 30 ರನ್ ನೀಡಿ 4 ಪ್ರಮುಖ ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಅವರು ಬೌಲ್ ಮಾಡಿದ 17.3 ಓವರ್‌ಗಳಲ್ಲಿ ಬರೋಬ್ಬರಿ ಒಂಬತ್ತು ಓವರ್‌ಗಳು ಮೇಡನ್ ಆಗಿದ್ದವು ಎಂಬುದು ಅವರ ನಿಖರತೆಗೆ ಸಾಕ್ಷಿ. ದೆಹಲಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಯಶ್ ಧುಲ್, ಆಯುಷ್ ದೋಸೆಜಾ, ಅರ್ಧಶತಕ ಸಿಡಿಸಿ ಆಡುತ್ತಿದ್ದ ಹೃತಿಕ್ ಶೋಕೀನ್ ಮತ್ತು ದಿವಿಜ್ ಮೆಹ್ರಾ ಅವರನ್ನು ಶಮಿ ಪೆವಿಲಿಯನ್‌ಗೆ ಅಟ್ಟಿದರು. ಶಮಿ ಅವರ ಈ ಮಾರಕ ದಾಳಿಯ ನೆರವಿನಿಂದ ಬಂಗಾಳ ತಂಡ ದೆಹಲಿಯನ್ನು ಕೇವಲ 240 ರನ್‌ಗಳಿಗೆ ಆಲೌಟ್ ಮಾಡಲು ಯಶಸ್ವಿಯಾಯಿತು. ಬಂಗಾಳದ ಇತರ ಪ್ರಮುಖ ವೇಗಿಗಳಾದ ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಅವರಿಗಿಂತ ಹೆಚ್ಚಿನ ಓವರ್‌ಗಳನ್ನು ಬೌಲ್ ಮಾಡಿದ ಶಮಿ, 1.71ರ ಎಕಾನಮಿ ರೇಟ್ ಕಾಯ್ದುಕೊಳ್ಳುವ ಮೂಲಕ ಶಿಸ್ತಿನ ದಾಳಿ ಸಂಘಟಿಸಿದ್ದರು.
ಭಾರತ ತಂಡಕ್ಕೆ ಮರಳುವ ತವಕ
ಭಾರತದ ಪರ ಕಡೆಯ ಬಾರಿಗೆ 2025ರ ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದ ಶಮಿ, ಆ ಬಳಿಕ ರಾಷ್ಟ್ರೀಯ ತಂಡದಿಂದ ದೂರವೇ ಉಳಿದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದರೂ ಅವರಿಗೆ ಅಂತರರಾಷ್ಟ್ರೀಯ ತಂಡದಲ್ಲಿ ಅವಕಾಶ ಒಲಿದಿಲ್ಲ. 2025ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಅಂದಿನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಶಮಿ ಫಿಟ್‌ನೆಸ್ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಶಮಿ, ತಾವು ಬಂಗಾಳ ಪರ ಆಡುತ್ತಿದ್ದು, ಸಂಪೂರ್ಣ ಫಿಟ್ ಆಗಿರುವುದಾಗಿ ಸಾಬೀತುಪಡಿಸಿದ್ದರು. ಇದೀಗ ರಣಜಿ ಟ್ರೋಫಿಯಲ್ಲಿ ಮತ್ತೊಮ್ಮೆ ತಮ್ಮ ಬೌಲಿಂಗ್ ಮೂಲಕ ಮಿಂಚಿರುವ ಶಮಿ, ತಮಗೆ ಫಿಟ್‌ನೆಸ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಹಾಗೂ ಆಟವನ್ನು ಆನಂದಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಅದ್ಭುತ ಪ್ರದರ್ಶನ ಅವರನ್ನು ಮತ್ತೆ ಭಾರತ ತಂಡಕ್ಕೆ ಕರೆತರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ :10 ರೂಪಾಯಿ ನಾಣ್ಯಗಳಲ್ಲೇ 1.23 ಲಕ್ಷ ರೂ.ಗಳ ‘ಹೋಂಡಾ ಆಕ್ಟಿವಾ’ ಖರೀದಿಸಿದ ತೆಲಂಗಾಣ ವ್ಯಕ್ತಿ!



















