ಕೊಚ್ಚಿ: ಅತಿವೇಗವಾಗಿ ಬಂದ ಮಿನಿ ಕೂಪರ್ ಕಾರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿ ವಿಮಾನ ನಿಲ್ದಾಣದ ಬಳಿ ನಡೆದಿದೆ. ಅಚ್ಚರಿಯೆಂದರೆ, ಅಪಘಾತದ ಬಳಿಕ ಸ್ಥಳದಲ್ಲಿದ್ದವರು ಪ್ರಶ್ನಿಸಿದಾಗ, 19 ವರ್ಷದ ಕಾರಿನ ಚಾಲಕ “ನನ್ನ ಅಪ್ಪ ಎಲ್ಲವನ್ನೂ ನೋಡಿಕೊಳ್ಳುತ್ತಾರೆ” ಎಂದು ದುರಹಂಕಾರದ ಮಾತುಗಳನ್ನಾಡಿದ್ದಾನೆ ಎನ್ನಲಾಗಿದೆ.ಭಾನುವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ನೆಡುಂಬಶ್ಶೇರಿ ಬಳಿ ಈ ಘಟನೆ ನಡೆದಿದೆ. ತೃಕ್ಕಾಕರಾದಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಸಮೀಪದ ಅಂಗಡಿಯಲ್ಲಿ ಚಹಾ ಕುಡಿದು ವಾಪಸ್ ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ವಯನಾಡಿನ ದೇವಿಕಾ, ಪಾಲಕ್ಕಾಡ್‌ನ ಗೋಪಿಕಾ ಹಾಗೂ ಕರ್ನಾಟಕ ಮೂಲದ ಐಜಾಜ್ ಎಂದು ಗುರುತಿಸಲಾಗಿದೆ.
ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು
ಮಿನಿ ಕೂಪರ್ ಕಾರು ಅತಿವೇಗದಲ್ಲಿ ಬಂದು ಸ್ಕೂಟರ್‌ಗೆ ಗುದ್ದಿದ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಮೂವರೂ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಪಘಾತದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರು ಅತಿವೇಗದಿಂದ ಬಂದು ಎಡಭಾಗದಲ್ಲಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಡಿಕ್ಕಿಯ ತೀವ್ರತೆಗೆ ಸವಾರರೊಬ್ಬರು ಗಾಳಿಯಲ್ಲಿ ಎಸೆಯಲ್ಪಟ್ಟಿದ್ದು, ಸ್ಕೂಟರ್ ನಜ್ಜುಗುಜ್ಜಾಗಿದೆ.
ಮದ್ಯ ಸೇವಿಸಿ ಚಾಲನೆ ಮಾಡಿದ್ದ ಶಂಕೆ
ಅಪಘಾತ ಎಸಗಿದ 19 ವರ್ಷದ ಚಾಲಕ ಸುಹೈಲ್ ಸಜೀವ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆಗೆ ಸಮಾನವಲ್ಲದ ನರಹತ್ಯೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಪಾದಿತ ಚಾಲಕ ಅಪಘಾತಕ್ಕೂ ಮುನ್ನ ಮದ್ಯ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆತನ ರಕ್ತದ ಮಾದರಿಗಳನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವಿಧಿವಿಜ್ಞಾನ ತಜ್ಞರು ಕಾರಿನ ಒಳಗೆ ಯಾವುದೇ ಅಮಲು ಪದಾರ್ಥಗಳಿವೆಯೇ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಆಸ್ಪತ್ರೆ ಬಳಿ ಚಾಲಕನ ಮೇಲೆ ಹಲ್ಲೆ
ವೈದ್ಯಕೀಯ ಪರೀಕ್ಷೆಗಾಗಿ ಸಜೀವ್ ನನ್ನು ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ, ಮೃತರ ಸ್ನೇಹಿತರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆಯ ಹೊರಗೆ ಕರೆತರುತ್ತಿದ್ದಾಗ ಆತನ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದೆ. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಹಲ್ಲೆ ನಡೆಸಿದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನವು ಚಾಲಕನ ತಂದೆಯ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಗೃಹಜ್ಯೋತಿ ವಿವರ ಸಲ್ಲಿಕೆಗೆ ಅ.31ರವರೆಗೆ ಅವಕಾಶ : ಯಾವೆಲ್ಲ ದಾಖಲೆ ಬೇಕು?



















