ಬೆಂಗಳೂರು: ಏಕೀಕೃತ ಪಾವತಿ ವ್ಯವಸ್ಥೆ ಅಂದರೆ, ಯುಪಿಐ ಮೂಲಕ 2 ಸಾವಿರ ರೂ.ಗಿಂತ ಹೆಚ್ಚಿನ ವಹಿವಾಟಿಗೆ ಶೇ.0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕ ವಿಧಿಸುವುದನ್ನು ಮುಂದೂಡಲಾಗುತ್ತದೆ ಎಂದು ತಿಳಿದುಬಂದಿದೆ. ಅಕ್ಟೋಬರ್ 15ರಿಂದಲೇ ಎಂಡಿಆರ್ ಶುಲ್ಕ ಜಾರಿಗೆ ಬರಬೇಕಿತ್ತು. ಆದರೆ, ಅಕ್ಟೋಬರ್ 15ರ ಬದಲಾಗಿ 2027ರ ಜನವರಿಯಿಂದ ಹೊಸ ಶುಲ್ಕ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ದೇಶಾದ್ಯಂತ ವ್ಯಾಪಾರಿಗಳು, ಫಿನ್ ಟೆಕ್ ಕಂಪನಿಗಳು ಮತ್ತು ಪಾವತಿ ವೇದಿಕೆಗಳು ಎಂಡಿಆರ್ ಜಾರಿಯನ್ನು ಮುಂದೂಡುವಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ)ಗೆ ಮನವಿ ಮಾಡಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಹಬ್ಬದ ಸೀಸನ್ ಸಮೀಪಿಸುತ್ತಿರುವುದರಿಂದ ಸಿದ್ಧತೆಗಳಿಗೆ ಹೆಚ್ಚಿನ ಸಮಯಾವಕಾಶ ನೀಡುವಂತೆ ಕೋರಲಾಗಿದೆ ಎಂದು ಹೇಳಲಾಗುತ್ತಿದೆ.
ಹೊಸ ನಿಯಮದ ಪ್ರಕಾರ, ಗ್ರಾಹಕರಿಂದ ವ್ಯಾಪಾರಿಗಳಿಗೆ ನಡೆಯುವ 2,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳ ಮೇಲೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ವಿಧಿಸುವ ಪ್ರಸ್ತಾಪವಿದೆ. ಆದರೆ, ಈ ನಿರ್ಧಾರದಿಂದ ಸಾಮಾನ್ಯ ಗ್ರಾಹಕರಿಗೆ ಯಾವುದೇ ಹೊರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ (ಪಿ2ಪಿ) ನಡೆಯುವ ಹಣ ವರ್ಗಾವಣೆಗಳು ಎಂದಿನಂತೆ ಸಂಪೂರ್ಣ ಉಚಿತವಾಗಿರಲಿದ್ದು, ಗ್ರಾಹಕರಿಂದ ಯಾವುದೇ ವಹಿವಾಟು ಶುಲ್ಕವನ್ನು ವಸೂಲಿ ಮಾಡಲಾಗುವುದಿಲ್ಲ. ಕೇವಲ ವ್ಯಾಪಾರಿಗಳಿಗೆ ಮಾತ್ರ ಈ ಶುಲ್ಕ ಅನ್ವಯಿಸಲಿದೆ.
ಆದರೆ, ಹಬ್ಬದ ಬಿಡುವಿಲ್ಲದ ಸಮಯದಲ್ಲಿ ಹೊಸ ತಂತ್ರಜ್ಞಾನ ಹಾಗೂ ಸಿಸ್ಟಮ್ ಗಳನ್ನು ಅಪ್ ಗ್ರೇಡ್ ಮಾಡಲು ವ್ಯಾಪಾರಿಗಳಿಗೆ ಮತ್ತು ಬ್ಯಾಂಕ್ ಗಳಿಗೆ ತೊಂದರೆಯಾಗಬಹುದು ಎಂಬ ಕಾರಣದಿಂದ ಎನ್ ಪಿಸಿಐ ಈ ಬಗ್ಗೆ ಮರುಚಿಂತನೆ ನಡೆಸುತ್ತಿದೆ. ಎನ್ ಪಿಸಿಐ ಹಾಗೂ ಹಣಕಾಸು ಸಚಿವಾಲಯದೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಅಲ್ಲಿಯವರೆಗೆ ಅಕ್ಟೋಬರ್ 15ರ ಗಡುವು ಮುಂದುವರಿಯಲಿದ್ದು, ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ವಿನಾಯಿತಿ ನೀಡುವ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಅಂತಿಮ ಅಧಿಕೃತ ಪ್ರಕಟಣೆಗಾಗಿ ಎಲ್ಲರೂ ಕಾಯಬೇಕಿದೆ.
ಇದನ್ನೂ ಓದಿ :ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ನೇಮಕಾತಿ: 46 ಸಾವಿರ ರೂ. ಸಂಬಳ !

















