ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಮತ್ತು ನಕಲಿ ಸಿಮ್ ಕಾರ್ಡ್ ಹಾವಳಿಗೆ ಕಡಿವಾಣ ಹಾಕಲು ದೂರಸಂಪರ್ಕ ಇಲಾಖೆ (DoT) ಕಠಿಣ ಕ್ರಮಗಳನ್ನು ಕೈಗೊಂಡಿದೆ. ನಕಲಿ ದಾಖಲೆ ಬಳಸಿ ಸಿಮ್ ಕಾರ್ಡ್ ಖರೀದಿಸುವುದು, ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ಬೇರೆಯವರಿಗೆ ನೀಡಿದರೆ 50 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ ಎಂದು ದೂರಸಂಪರ್ಕ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ನೂತನ ದೂರಸಂಪರ್ಕ ಕಾಯ್ದೆ ಅನ್ವಯ, ಯಾವುದೇ ವ್ಯಕ್ತಿಯು ತಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಗಳನ್ನು ಬೇರೆಯವರ ಬಳಕೆಗೆ ನೀಡುವುದು ಅಥವಾ ನಕಲಿ ದಾಖಲೆಗಳ ಮೂಲಕ ಸಿಮ್ ಪಡೆಯುವುದು ಕಾನೂನುಬಾಹಿರವಾಗಿದೆ. ಒಂದು ವೇಳೆ ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಂಡರೆ ಅಥವಾ ಬೇರೆಯವರಿಗೆ ವರ್ಗಾಯಿಸಿದರೆ, ಅದರಿಂದ ಉಂಟಾಗುವ ಕಾನೂನು ತೊಡಕುಗಳಿಗೆ ಮೂಲ ಚಂದಾದಾರರೇ ನೇರ ಜವಾಬ್ದಾರರಾಗುತ್ತಾರೆ ಎಂದು ತಿಳಿಸಲಾಗಿದೆ.
ಅಲ್ಲದೆ, ನಕಲಿ ದಾಖಲೆಗಳ ಮೂಲಕ ಸಿಮ್ ಕಾರ್ಡ್ ಗಳನ್ನು ಪಡೆದುಕೊಳ್ಳುವುದು, ಮೋಸ ಮಾಡುವುದು ಅಥವಾ ಐಎಂಇಐ ಸಂಖ್ಯೆಗಳನ್ನು ತಿರುಚುವಂತಹ ಚಟುವಟಿಕೆಗಳಲ್ಲಿ ತೊಡಗಿದರೆ ಗಂಭೀರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೊಸ ನಿಯಮಗಳ ಪ್ರಕಾರ, ಇಂತಹ ಗಂಭೀರ ಅಪರಾಧಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಸೈಬರ್ ವಂಚನೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ತಮ್ಮ ಹೆಸರಿನಲ್ಲಿ ಯಾವುದೇ ಅನಧಿಕೃತ ಸಿಮ್ ಕಾರ್ಡ್ ಗಳು ಚಾಲನೆಯಲ್ಲಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ‘ಸಂಚಾರ ಸಾರ್ಥಿ’ ಅಧಿಕೃತ ವೆಬ್ ಸೈಟ್ (https://www.sancharsaathi.gov.in) ಅಥವಾ ಮೊಬೈಲ್ ಆ್ಯಪ್ ಬಳಸಿ ನಿಯಮಿತವಾಗಿ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಅನಧಿಕೃತ ಸಂಖ್ಯೆಗಳು ಕಂಡುಬಂದಲ್ಲಿ ಅವುಗಳನ್ನು ತಕ್ಷಣವೇ ಬ್ಲಾಕ್ ಮಾಡಲು ಪೋರ್ಟಲ್ ನಲ್ಲಿ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : Asian Games 2026 : ರಿಲೇಯಲ್ಲಿ ಭಾರತದ ವನಿತೆಯರಿಗೆ ಚಿನ್ನದ ಮುಕುಟ.. ದಂತಕಥೆ ಪಿ.ಟಿ. ಉಷಾ ಭಾವುಕ!



















