ಬೆಂಗಳೂರು : ದಸರಾ, ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಮನೆಗೆ ಹೊಸ ಟಿ.ವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ತರಬೇಕು ಎಂದು ಪ್ಲಾನ್ ಮಾಡಿದವರಿಗೆ ಶಾಕಿಂಗ್ ನ್ಯೂಸ್ ದೊರೆತಿದೆ. ಅಕ್ಟೋಬರ್ 1ರಿಂದ ಟಿವಿ, ಫ್ರಿಡ್ಜ್ ಸೇರಿ ಗೃಹಬಳಕೆಯ ಹಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಇದರೊಂದಿಗೆ ಈಗಾಗಲೇ ಬೆಲೆಯೇರಿಕೆಯಿಂದ ಪರಿತಪಿಸುತ್ತಿರುವ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ.
ಎಲ್ಇಡಿ ಟಿವಿ, ವಾಷಿಂಗ್ ಮೆಷಿನ್ ಸೇರಿ ಹಲವು ಉತ್ಪನ್ನಗಳ ಬೆಲೆಯಲ್ಲಿ ಶೇ.5-8ರಷ್ಟು ಜಾಸ್ತಿಯಾಗಲಿದೆ. ಏರ್ ಕಂಡಿಷನರ್ ಸೇರಿ ಹಲವು ಉತ್ಪನ್ನಗಳ ಬೆಲೆಯಲ್ಲಿ ಶೇ.3-4ರಷ್ಟು ಜಾಸ್ತಿಯಾಗಲಿದೆ. ಈಗಾಗಲೇ ಬ್ಲ್ಯೂ ಸ್ಟಾರ್, ಗೋದ್ರೆಜ್, ಡೈಕಿನ್ ಸೇರಿ ಹಲವು ಕಂಪನಿಗಳು ಶೇ.4-10ರಷ್ಟು ಬೆಲೆ ಏರಿಕೆ ಮಾಡುವುದಾಗಿ ಘೋಷಣೆ ಮಾಡಿವೆ. ಹಬ್ಬದ ವೇಳೆ ಹೆಚ್ಚಿನ ಜನ ಎಲೆಕ್ಟ್ರಾನಿಕ್ ಉತ್ಪನ್ನಗಳು ಖರೀದಿ ಮಾಡುತ್ತಾರೆ. ಆಫರ್ ನೋಡಿಕೊಂಡು ಖರೀದಿಸುವ ಯೋಜನೆ ಹಾಕಿಕೊಂಡಿರುತ್ತಾರೆ. ಈಗ ಅವರಿಗೆಲ್ಲ ಇದು ಶಾಕಿಂಗ್ ಎನಿಸಿದೆ.
ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಕರೆನ್ಸಿ ವಿನಿಮಯದಲ್ಲಿ ಭಾರಿ ಏರಿಳಿತ ಉಂಟಾಗಿದೆ. ಪೂರೈಕೆ ಕೊರತೆ, ಸಾಗಣೆ ವೆಚ್ಚದ ಏರಿಕೆಯಿಂದಾಗಿ ಅಲ್ಯುಮಿನಿಯಂ, ಉಕ್ಕು, ತಾಮ್ರ, ಪ್ಲಾಸ್ಟಿಕ್ ಸೇರಿ ಹಲವು ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಇದರಿಂದಾಗಿ ಅಕ್ಟೋಬರ್ 1ರಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದಾಗಿ ಈಗಾಗಲೇ ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್, ಡೀಸೆಲ್-ಪೆಟ್ರೋಲ್ ಸೇರಿ ಬಹುತೇಕ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗಿದೆ. ಸ್ಮಾರ್ಟ್ ಫೋನ್ ಬೆಲೆಗಳು ಕೂಡ ಜಾಸ್ತಿಯಾಗಿವೆ. ಇದರ ಬೆನ್ನಲ್ಲೇ, ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗುತ್ತಿರುವುದು ಜನರಿಗೆ ಕಹಿ ಸುದ್ದಿ ಎನಿಸಿದೆ.
ಇದನ್ನೂ ಓದಿ : ವಿರಾಟ್ ಕೊಹ್ಲಿಯ ಹೊಸ ಬ್ಯಾಟಿಂಗ್ ವಿಧಾನ ಬಿಚ್ಚಿಟ್ಟ ಶುಭಮನ್ ಗಿಲ್!



















