ಬೆಂಗಳೂರು : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧ್ಯಕ್ಷರಾಗಿ ಶಾಸಕ ಬಿ. ಶಿವಣ್ಣ ಅವರನ್ನು ನೇಮಕ ಮಾಡಿರುವ ಸರ್ಕಾರದ ನಿರ್ಧಾರ ಇದೀಗ ಪ್ರಶ್ನೆಗೆ ಒಳಗಾಗಿದೆ. ನೇಮಕಾತಿಗೆ ಅಗತ್ಯವಿರುವ ಕಾನೂನುಬದ್ಧ ಅರ್ಹತೆ ಹಾಗೂ ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ಪರಿಶೀಲಿಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದ್ದಾರೆ. ಸೆಪ್ಟೆಂಬರ್ 25ರಂದು ಸರ್ಕಾರ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಸಮಗ್ರವಾಗಿ ಪರಿಶೀಲಿಸಿ, ಕಾನೂನಿನಲ್ಲಿ ನಿಗದಿಪಡಿಸಿರುವ ಅರ್ಹತೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿದೆಯೇ ಎಂಬುದನ್ನು ತನಿಖೆ ನಡೆಸುವಂತೆ ಅವರು ಮನವಿ ಮಾಡಿದ್ದಾರೆ.
KSPCB ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ Water (Prevention and Control of Pollution) Act, 1974ರ ಸೆಕ್ಷನ್ 4(2)(a)ರಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂಬುದೇ ದಿನೇಶ್ ಕಲ್ಲಹಳ್ಳಿ ದೂರಿನ ಪ್ರಮುಖ ಅಂಶವಾಗಿದೆ. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ, ಅಥವಾ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸಂಸ್ಥೆಗಳ ಆಡಳಿತದಲ್ಲಿ ಜ್ಞಾನ ಮತ್ತು ಅನುಭವ ಹೊಂದಿರುವ ವ್ಯಕ್ತಿಯನ್ನು ಅಧ್ಯಕ್ಷರಾಗಿ ನೇಮಕ ಮಾಡಬೇಕೆಂಬ ಕಾನೂನುಬದ್ಧ ಮಾನದಂಡವನ್ನು ಬಿ. ಶಿವಣ್ಣ ಅವರ ನೇಮಕಾತಿಯಲ್ಲಿ ಪರಿಗಣಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಅವರು ಕೋರಿದ್ದಾರೆ.
ಶಾಸಕ ಬಿ. ಶಿವಣ್ಣ ಅವರ ಶೈಕ್ಷಣಿಕ ಹಾಗೂ ವೃತ್ತಿಪರ ಅರ್ಹತೆಗಳ ಜತೆಗೆ ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಪರಿಸರ ಆಡಳಿತ ಮತ್ತು ಪರಿಸರ ಸಂಬಂಧಿತ ಸಂಸ್ಥೆಗಳ ನಿರ್ವಹಣೆಯಲ್ಲಿ ಅವರು ಹೊಂದಿರುವ ನೈಜ ಅನುಭವದ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ದೂರಿನಲ್ಲಿ ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
ಇದಲ್ಲದೆ, ಬಿ. ಶಿವಣ್ಣ ಅವರನ್ನು KSPCB ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮುನ್ನ ನಡೆದ ಸಂಪೂರ್ಣ ಆಡಳಿತಾತ್ಮಕ ಪ್ರಕ್ರಿಯೆಯನ್ನೇ ಪರಿಶೀಲಿಸಬೇಕು. ಆಯ್ಕೆ ಸಮಿತಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಿತು, ಅಭ್ಯರ್ಥಿಗಳ ಅರ್ಹತೆಯನ್ನು ಹೇಗೆ ಪರಿಶೀಲಿಸಲಾಯಿತು, ಇತರ ಅರ್ಹ ಅಭ್ಯರ್ಥಿಗಳೊಂದಿಗೆ ತುಲನಾತ್ಮಕ ಮೌಲ್ಯಮಾಪನ ನಡೆಸಲಾಗಿತ್ತೇ, ಆಯ್ಕೆಗೆ ಕಾರಣಸಹಿತ ಶಿಫಾರಸು ನೀಡಲಾಗಿತ್ತೇ ಎಂಬುದನ್ನು ಮೂಲ ದಾಖಲೆಗಳ ಮೂಲಕ ಪರಿಶೀಲಿಸುವಂತೆ ದೂರಿನಲ್ಲಿ ದಿನೇಶ್ ಕಲ್ಲಹಳ್ಳಿ ಕೋರಿದ್ದಾರೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಕಾನೂನುಬದ್ಧ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂಬುದಕ್ಕೂ ಒತ್ತು ನೀಡಿರುವ ದಿನೇಶ್ ಕಲ್ಲಹಳ್ಳಿ, KSPCB ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರತಿಪಾದಿಸಿರುವ ಮಾರ್ಗಸೂಚಿಗಳು, ಕರ್ನಾಟಕ ಸರ್ಕಾರದ ಸಂಬಂಧಿತ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ವಿಶೇಷವಾಗಿ ಅಧ್ಯಕ್ಷ ಸ್ಥಾನಕ್ಕೆ ಅಗತ್ಯವಿರುವ ಅರ್ಹತೆಗಳ ಪರಿಶೀಲನೆ ಯಾವ ಹಂತದಲ್ಲಿ ಮತ್ತು ಯಾವ ದಾಖಲೆಗಳ ಆಧಾರದ ಮೇಲೆ ನಡೆದಿದೆ ಎಂಬುದನ್ನು ಬಹಿರಂಗಪಡಿಸುವ ಅಗತ್ಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾನೂನುಬದ್ಧ ಅರ್ಹತೆ ಹಾಗೂ ಕಡ್ಡಾಯ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಲೋಪ ಕಂಡುಬಂದರೆ, ಸೆಪ್ಟೆಂಬರ್ 25ರಂದು ಹೊರಡಿಸಿರುವ ಬಿ. ಶಿವಣ್ಣ ಅವರ ನೇಮಕಾತಿ ಅಧಿಸೂಚನೆಯನ್ನು ರದ್ದುಪಡಿಸುವಂತೆ ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ. ಜೊತೆಗೆ, ನೇಮಕಾತಿಯೇ ಕಾನೂನುಬದ್ಧ ಮಾನದಂಡಗಳನ್ನು ಪೂರೈಸಿಲ್ಲವೆಂದು ತನಿಖೆಯಲ್ಲಿ ದೃಢಪಟ್ಟರೆ, KSPCB ಅಧ್ಯಕ್ಷರಾಗಿ ಬಿ. ಶಿವಣ್ಣ ಅವರ ನೇಮಕಾತಿಯನ್ನು ವಜಾಗೊಳಿಸಿ, ನಿಯಮಾನುಸಾರ ಹೊಸದಾಗಿ ಅಧ್ಯಕ್ಷರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಅಥವಾ ಶಿಫಾರಸು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ‘ವಿಶ್ವದ ಅಗ್ರ ಏಕದಿನ ಬ್ಯಾಟರ್’ : ಸಾಧನೆಯ ಬಳಿಕ ಕೊಹ್ಲಿ ಹೇಳಿದ ಈ ಮಾತು ಯಾರಿಗೆ?



















