ಪುಣೆ : ಭಾವಿ ಪತ್ನಿ ಹಾಗೂ ಆಕೆಯ ಪ್ರಿಯಕರನಿಂದಲೇ ಕೊಲೆಗೀಡಾಗಿದ್ದಾರೆ ಎನ್ನಲಾದ ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ (26) ಅವರ ಅನುಮಾನಾಸ್ಪದ ಸಾವು ಪ್ರಕರಣವು ಈಗ ರೋಚಕ ತಿರುವು ಪಡೆದುಕೊಂಡಿದೆ. ಲೋಹಗಡ ಕೋಟೆಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದ ಈ ಘಟನೆ ಆಕಸ್ಮಿಕ ಅಪಘಾತವಲ್ಲ, ಬದಲಿಗೆ ಪಕ್ಕಾ ಯೋಜಿತ ಕೊಲೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಕೇತನ್ ಅಗರ್ವಾಲ್ ಅವರನ್ನು ಕೋಟೆಯ ತುದಿಯಿಂದ ಕಂದಕಕ್ಕೆ ತಳ್ಳುವುದನ್ನು ಕಣ್ಣಾರೆ ಕಂಡ ಸಾಕ್ಷಿಯೊಬ್ಬರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ಈ ಪ್ರಕರಣದಲ್ಲಿ ಆರೋಪಿಗಳ ಕೃತ್ಯ ಬಯಲಿಗೆ ಬಂದಿದೆ.
ಕಣ್ಣಾರೆ ಕಂಡ ಭೀಕರ ದೃಶ್ಯ, ಬೆನ್ನಲ್ಲೇ ಜೀವ ಬೆದರಿಕೆ
ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿ ನೀಡಿದ ಹೇಳಿಕೆಯ ಪ್ರಕಾರ, ಜೂನ್ 18 ರಂದು ಅವರು ತಮ್ಮ ಸ್ನೇಹಿತನ ಕುಟುಂಬದೊಂದಿಗೆ ಲೋಹಗಡ ಕೋಟೆಗೆ ತೆರಳಿದ್ದರು. ಈ ವೇಳೆ ಕೇತನ್ ಅಗರ್ವಾಲ್, ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಸಿಯಾಳ ಪ್ರಿಯಕರ ಎನ್ನಲಾದ ಚೇತನ್ ಚೌಧರಿ ಜೊತೆಯಾಗಿ ನಡೆಯುತ್ತಿದ್ದರು. ಕೋಟೆಯ ತುದಿಯಲ್ಲಿದ್ದಾಗ ಸಿಯಾ ಗೋಯಲ್ ಅವರು ಕೇತನ್ ಕಾಲಿಗೆ ಒದ್ದು ಕುಳಿತ ತಕ್ಷಣವೇ, ಹಿಂದಿನಿಂದ ಓಡಿಬಂದ ಚೇತನ್ ಚೌಧರಿ ಕೇತನ್ ಅವರನ್ನು ಕಂದಕಕ್ಕೆ ತಳ್ಳಿದ್ದಾನೆ.
ಇದನ್ನು ಕಣ್ಣಾರೆ ಕಂಡ ಸಾಕ್ಷಿಯು, ಆ ಬಗ್ಗೆ ಪ್ರಶ್ನಿಸಿದಾದ ಆರೋಪಿ ಚೇತನ್, “ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನೂ ಇಲ್ಲೇ ಕಂದಕಕ್ಕೆ ತಳ್ಳಿ ಕೊಲ್ಲುತ್ತೇನೆ” ಎಂದು ಬೆದರಿಕೆ ಹಾಕಿದ್ದ. ಘಟನೆಯಿಂದ ಭಯಭೀತರಾಗಿದ್ದ ಸಾಕ್ಷಿ, ನಂತರ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಜೂನ್ 23ರಂದು ಧೈರ್ಯವಾಗಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.
ಹೂಡಿಯಿಂದ ಸಿಕ್ಕಿಬಿದ್ದ ಆರೋಪಿ
ಬೇಸಿಗೆಯ ಕಡು ಬಿಸಿಲಿದ್ದರೂ ಆರೋಪಿ ಚೇತನ್ ಚೌಧರಿ ಧರಿಸಿದ್ದ ‘ಹೂಡಿ’ (ತಲೆ ಮುಚ್ಚುವ ಜಾಕೆಟ್) ಸಾಕ್ಷಿಗಳ ಗಮನ ಸೆಳೆಯಲು ಪ್ರಮುಖ ಕಾರಣವಾಯಿತು. ಇಷ್ಟೊಂದು ಬಿಸಿಲಿನಲ್ಲಿ ಹುಡಿ ಏಕೆ ಧರಿಸಿದ್ದೀಯಾ ಎಂದು ಸಾಕ್ಷಿಗಳು ಆತನನ್ನು ಪ್ರಶ್ನಿಸಿದ್ದರು. ಈ ಪ್ರಮುಖ ಗುರುತು ಆರೋಪಿಯನ್ನು ಗುರುತಿಸಲು ಪೊಲೀಸರಿಗೆ ನೆರವಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಗ್ರಾಮಾಂತರ ಪೊಲೀಸರು ಈಗಾಗಲೇ 5,053 ಪುಟಗಳ ಬೃಹತ್ ಚಾರ್ಜ್ಶೀಟ್ ಸಲ್ಲಿಸಿದ್ದು, ಸಿಯಾ ಗೋಯಲ್, ಚೇತನ್ ಚೌಧರಿ ಹಾಗೂ ಅವರಿಗೆ ನೆರವಾದ ಸ್ನೇಹಿತ ರಿತೇಶ್ ಹಾಂಗೆ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
12 ಟಿಬಿ ಡಿಜಿಟಲ್ ಸಾಕ್ಷ್ಯಗಳ ಸರಣಿ ತನಿಖೆ
ಪೋಲಿಸರು ಈ ಪ್ರಕರಣದ ತನಿಖೆಗಾಗಿ ಸುಮಾರು 12 ಟಿಬಿಯಷ್ಟು (TB) ಬೃಹತ್ ಡಿಜಿಟಲ್ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಇದರಲ್ಲಿ ಆರೋಪಿಗಳ 6 ಮೊಬೈಲ್ ಫೋನ್ಗಳು, 9 ಪೆನ್ಡ್ರೈವ್ಗಳು, ಕಾಲ್ ರೆಕಾರ್ಡ್ಗಳು ಮತ್ತು ಚಾಟಿಂಗ್ ವಿವರಗಳು ಸೇರಿವೆ. ಕೊಲೆಯ ನಂತರ ಐಫೋನ್ನಿಂದ ಚಾಟ್ ಹಿಸ್ಟರಿ ಮತ್ತು ಸಾಕ್ಷ್ಯಗಳನ್ನು ಹೇಗೆ ಅಳಿಸುವುದು, ಡಿಲೀಟ್ ಮಾಡಿದ ಡೇಟಾವನ್ನು ಮರಳಿ ಪಡೆಯದಂತೆ ಮಾಡುವುದು ಹೇಗೆ ಎಂದು ಆರೋಪಿಗಳು ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದರು ಎಂಬುದು ವಿಧಿವಿಜ್ಞಾನ ತನಿಖೆಯಲ್ಲಿ ಪತ್ತೆಯಾಗಿದೆ. ಡಿಲೀಟ್ ಮಾಡಲಾಗಿದ್ದ ಹಲವು ನಿರ್ಣಾಯಕ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳು ಯಶಸ್ವಿಯಾಗಿ ಮರುಪಡೆದಿದ್ದಾರೆ.
ಇದನ್ನೂ ಓದಿ : ಏಕದಿನದಲ್ಲಿ ಜಡೇಜಾಗೆ ಕಾಡಿದ ಕಳಪೆ ಫಾರ್ಮ್ ; 7 ಪಂದ್ಯಗಳಲ್ಲಿ ಒಂದೇ ವಿಕೆಟ್.. ಬೌಲಿಂಗ್ ಸರಾಸರಿ 352!


















