ಬೆಂಗಳೂರು : ಟಾಟಾ ಮೋಟಾರ್ಸ್ ಭಾರತದಲ್ಲಿ ತನ್ನ ಹೊಸ ಕಾಂಪ್ಯಾಕ್ಟ್ ಸೆಡಾನ್ ಏರಿಸ್ ಕಾರನ್ನು ಬಿಡುಗಡೆ ಮಾಡಿದೆ. ಆರಂಭಿಕ ಎಕ್ಸ್ ಶೋರೂಂ ಬೆಲೆ 5.29 ಲಕ್ಷ ರೂಪಾಯಿ ಆಗಿದ್ದು,, ಟಾಪ್ ವೇರಿಯೆಂಟ್‌ನ ಬೆಲೆ ರೂಪಾಯಿ 9.19 ಲಕ್ಷವಾಗಿದೆ. ಟಾಟಾ ಟಿಗೋರ್‌ಗೆ ಬದಲಿಯಾಗಿ ಬಂದಿರುವ ಏರಿಸ್, ಮಾರುತಿ ಡಿಜೈರ್, ಹೋಂಡಾ ಅಮೇಜ್ ಮತ್ತು ಹ್ಯುಂಡೈ ಔರಾ ಕಾರುಗಳಿಗೆ ಪೈಪೋಟಿ ನೀಡಲಿದೆ.
ಡಿಜೈರ್‌ನ ಆರಂಭಿಕ ಬೆಲೆ ರೂಪಾಯಿ 6.26 ಲಕ್ಷವಾಗಿರುವುದರಿಂದ, ಏರಿಸ್ ಆರಂಭಿಕ ಹಂತದಲ್ಲೇ ಸುಮಾರು ರೂಪಾಯಿ 70,000 ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಏರಿಸ್ ಐದು ಪ್ರಮುಖ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸ್ಮಾರ್ಟ್, ಪ್ಯೂರ್, ಪ್ಯೂರ್ ಪ್ಲಸ್, ಕ್ರಿಯೇಟಿವ್ ಮತ್ತು ಅಕಾಂಪ್ಲಿಶ್ಡ್ ಎಂಬ ವೇರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ. ಕಾರಿನ ಬುಕಿಂಗ್ ಆರಂಭವಾಗಿದ್ದು, ನವರಾತ್ರಿ ಮೊದಲ ದಿನದಿಂದ ವಿತರಣೆ ಪ್ರಾರಂಭವಾಗಲಿದೆ. ಏರಿಸ್ ಅನ್ನು ವೈಯಕ್ತಿಕ ಬಳಕೆದಾರರಿಗಾಗಿ ಮಾತ್ರ ಮಾರಾಟ ಮಾಡಲಾಗುತ್ತದೆ. ವಾಣಿಜ್ಯ ಅಥವಾ ಫ್ಲೀಟ್ ಬಳಕೆದಾರರಿಗೆ ಈ ಕಾರು ಲಭ್ಯವಿರುವುದಿಲ್ಲ.
ಟಿಗೋರ್‌ಗಿಂತ ಸಂಪೂರ್ಣ ವಿಭಿನ್ನ ವಿನ್ಯಾಸ
ವಿನ್ಯಾಸದ ವಿಚಾರದಲ್ಲಿ ಟಾಟಾ ಏರಿಸ್ ಟಿಗೋರ್‌ಗಿಂತ ಸಾಕಷ್ಟು ಬದಲಾವಣೆ ಹೊಂದಿದೆ. ಮುಂಭಾಗದಲ್ಲಿ ಸಣ್ಣ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್, ಸಿ ಆಕಾರದ ವಿನ್ಯಾಸದ ಅಂಶಗಳು, ವಿಶಾಲವಾದ ಕೆಳಭಾಗದ ಗ್ರಿಲ್ ಹಾಗೂ 15 ಇಂಚಿನ ಡೈಮಂಡ್ ಏರೋ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ವೀಲ್ ಆರ್ಚ್ ಕ್ಲಾಡಿಂಗ್, ಶಾರ್ಕ್ ಫಿನ್ ಆಂಟೆನಾ ಮತ್ತು ಸಂಪರ್ಕ ಹೊಂದಿರುವಂತೆ ಕಾಣುವ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಕಾರಿನ ವಿನ್ಯಾಸಕ್ಕೆ ಹೊಸ ರೂಪ ನೀಡಿವೆ.
ಏರಿಸ್‌ನ ಹಿಂಭಾಗದಲ್ಲಿ ಇಳಿಜಾರಾದ ಮೇಲ್ಛಾವಣಿ ಮತ್ತು ಫಾಸ್ಟ್‌ಬ್ಯಾಕ್ ಶೈಲಿಯ ವಿನ್ಯಾಸವಿದೆ. ಬೂಟ್ ಮುಚ್ಚಳದ ಮೇಲೆ ಸ್ಪಾಯ್ಲರ್‌ನಂತಹ ವಿನ್ಯಾಸವಿದ್ದು, ಹಿಂಭಾಗದ ನೋಟದಲ್ಲಿ ಟಾಟಾ ಕರ್ವ್ ಕಾರಿನ ಛಾಯೆಯೂ ಕಾಣಿಸುತ್ತದೆ. ಕಾರಿನಲ್ಲಿ 419 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹಾಗೂ 170 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಇದೆ. ಗ್ರಾಹಕರಿಗೆ ಡೇಟೋನಾ ಗ್ರೇ, ಪ್ರಿಸ್ಟೀನ್ ವೈಟ್, ಡ್ಯೂನ್ ಗ್ಲೋ, ಪ್ಯೂರ್ ಗ್ರೇ, ನೈಟ್ರೋ ಕ್ರಿಮ್ಸನ್ ಮತ್ತು ದಾಂಡೇಲಿ ಡ್ರಿಜಲ್ ಸೇರಿದಂತೆ ಆರು ಬಣ್ಣಗಳ ಆಯ್ಕೆ ನೀಡಲಾಗಿದೆ.
10.25 ಇಂಚಿನ ಟಚ್ ಸ್ಕ್ರೀನ್ , 360 ಡಿಗ್ರಿ ಕ್ಯಾಮೆರಾ
ಏರಿಸ್‌ನ ಒಳಾಂಗಣದಲ್ಲೂ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೊಸ ಡ್ಯಾಶ್‌ಬೋರ್ಡ್, ಎರಡು ಸ್ಪೋಕ್ ಸ್ಟೀರಿಂಗ್ ವೀಲ್, ಲೆದರೆಟ್ ಸೀಟ್‌ಗಳು ಮತ್ತು ವೆಂಟಿಲೇಟೆಡ್ ವ್ಯವಸ್ಥೆಯಿರುವ ಸೀಟ್‌ಗಳನ್ನು ನೀಡಲಾಗಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಆರು ಸ್ಪೀಕರ್‌ಗಳ ಆಡಿಯೊ ವ್ಯವಸ್ಥೆ ಪ್ರಮುಖ ವೈಶಿಷ್ಟ್ಯಗಳಾಗಿವೆ.
ಇದರ ಜತೆಗೆ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರೋಟರಿ ಗೇರ್ ಸೆಲೆಕ್ಟರ್, ಹಿಂಭಾಗದ ಎಸಿ ವೆಂಟ್, 65 ವ್ಯಾಟ್ ಟೈಪ್-ಸಿ ಯುಎಸ್‌ಬಿ ಪೋರ್ಟ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್–ಸ್ಟಾಪ್, ಮಳೆ ಗುರುತಿಸುವ ವೈಪರ್, ಸ್ವಯಂಚಾಲಿತ ಹೆಡ್‌ಲ್ಯಾಂಪ್, 360 ಡಿಗ್ರಿ ಕ್ಯಾಮೆರಾ ಮತ್ತು ಡ್ಯಾಶ್‌ಕ್ಯಾಮ್ ಸೇರಿದಂತೆ ಹಲವು ಫೀಚರ್ಗಳಿವೆ. ಸುರಕ್ಷತೆಗಾಗಿ ಆರು ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಇಎಸ್‌ಪಿ, ಟೈರ್ ಪ್ರೆಶರ್ ಮಾನಿಟರಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ನೀಡಲಾಗಿದೆ.
ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆ
ಟಾಟಾ ಏರಿಸ್ 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 86 ಪಿಎಸ್ ಶಕ್ತಿ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನುಯಲ್ ಮತ್ತು 5 ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳಿವೆ. ಸಿಎನ್‌ಜಿ ಆವೃತ್ತಿಯಲ್ಲಿ 75.5 ಪಿಎಸ್ ಶಕ್ತಿ ಮತ್ತು 96.5 ಎನ್‌ಎಂ ಟಾರ್ಕ್ ದೊರೆಯುತ್ತದೆ. ಸಿಎನ್‌ಜಿ ಮಾದರಿಯಲ್ಲೂ ಮ್ಯಾನುಯಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ. ಹೊಸ ವಿನ್ಯಾಸ, ಹೆಚ್ಚಿನ ತಂತ್ರಜ್ಞಾನ, ಸುರಕ್ಷತಾ ವೈಶಿಷ್ಟ್ಯಗಳು ಹಾಗೂ ಪೆಟ್ರೋಲ್–ಸಿಎನ್‌ಜಿ ಆಯ್ಕೆಗಳೊಂದಿಗೆ ಟಾಟಾ ಏರಿಸ್ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಸ್ಪರ್ಧೆಗೆ ವೇದಿಕೆ ಸಿದ್ಧಪಡಿಸಿದೆ.
ಇದನ್ನೂ ಓದಿ : ‘ಅವರು ಹೋದ್ರೂ ಕ್ರಿಕೆಟ್ ನಿಲ್ಲುವುದಿಲ್ಲ’ ; ರೋಹಿತ್–ಕೊಹ್ಲಿ ನಿವೃತ್ತಿ ಚರ್ಚೆಗೆ ಸೆಹ್ವಾಗ್ ಈ ರೀತಿ ಹೇಳಿದ್ಯಾಕೆ?



















