ಬೆಂಗಳೂರು : ಕೆಂಗೇರಿ ವಿಭಾಗದ ಕಂದಾಯ ಇಲಾಖೆಯ ಅಧಿಕಾರಿಗಳು ಕಾನೂನು ಬಾಹಿರವಾಗಿ ನಿರ್ಮಿಸಿರುವ ನಾಲ್ಕು ಅಪಾರ್ಟ್‌ಮೆಂಟ್‌ಗಳಲ್ಲಿನ 20ಕ್ಕೂ ಹೆಚ್ಚು ಫ್ಲ್ಯಾಟ್‌ಗಳಿಗೆ ‘ಬಿ’ ವಹಿ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಅವರು ಜಿಬಿಎ ಮುಖ್ಯ ಆಯುಕ್ತ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್‌ನ ರಘುವನಹಳ್ಳಿ ಬಡಾವಣೆಯಲ್ಲಿ ಈ ಅಕ್ರಮ ನಡೆದಿದ್ದು, ರಘುವನಹಳ್ಳಿಯಲ್ಲಿ ರವೀಂದ್ರ ಮತ್ತು ಧನಂಜಯ್ ಎಂಬ ಬಿಲ್ಡರ್‌ಗಳು ‘ಎಸ್‌ಆರ್ ಗೋಲ್ಡ್‌ಲೈನ್’, ‘ಎಸ್‌ಆರ್ ಸಿಲ್ವರ್‌ಲೈನ್’, ‘ಎಸ್‌ಆರ್ ಪ್ಲಾಟಿನಂ’ ಹಾಗೂ ‘ಎಸ್‌ಆರ್ ಡೈಮಂಡ್’ ಹೆಸರಿನಲ್ಲಿ ನಾಲ್ಕು ವಸತಿ ಸಮುಚ್ಚಯಗಳನ್ನು ನಿರ್ಮಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕಟ್ಟಡಗಳಿಗೆ ಇದುವರೆಗೂ ಪ್ರಾರಂಭಿಕ ಪ್ರಮಾಣ ಪತ್ರ ಹಾಗೂ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆದಿಲ್ಲ. ಅಲ್ಲದೆ, ಕಟ್ಟಡಗಳಿಗೆ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕವೂ ನೀಡಲಾಗಿಲ್ಲ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಇಂತಹ ಕಟ್ಟಡಗಳಲ್ಲಿನ ಫ್ಲ್ಯಾಟ್‌ಗಳಿಗೆ ವಿವಿಧ ದಿನಾಂಕಗಳಲ್ಲಿ ಖಾತೆಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಕಂದಾಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಖಾತೆ ಮಾಡಿಕೊಟ್ಟಿದ್ದಾರೆ. ಪ್ರತಿ ಫ್ಲ್ಯಾಟ್‌ಗೆ 50 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಲಂಚ ಪಡೆದು ‘ಬಿ’ ವಹಿ ಖಾತೆ ಮಾಡಿಕೊಡಲಾಗಿದೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ನಾಲ್ಕು ಕಟ್ಟಡಗಳಲ್ಲಿನ 20ಕ್ಕೂ ಹೆಚ್ಚು ಫ್ಲ್ಯಾಟ್‌ಗಳಿಗೆ ನಕಲಿ ಇ-ಪಿಐಡಿಗಳನ್ನು ಸೃಷ್ಟಿಸಿ ‘ಬಿ’ ವಹಿ ಖಾತೆ ಮಾಡಿಕೊಡಲಾಗಿದೆ. ಇದರಿಂದ ಬೆಂಗಳೂರು ಪಶ್ಚಿಮ ನಗರ ಪಾಲಿಕೆಗೆ ಒಂದು ಕೋಟಿಗೂ ಹೆಚ್ಚು ರೂಪಾಯಿ ನಷ್ಟವಾಗಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ಸಂಬಂಧಿಸಿದ ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸುವಂತೆ ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ.
ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಪರಿವೀಕ್ಷಕ, ಗುಮಾಸ್ತ ಹಾಗೂ ಗಣಕಯಂತ್ರ ನಿರ್ವಾಹಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ನೌಕರರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಬೇಕು. ಆರೋಪಗಳು ಸಾಬೀತಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಮಾಡಲಾಗಿದೆ ಎಂದು ಆರೋಪಿಸಿರುವ 20ಕ್ಕೂ ಹೆಚ್ಚು ಖಾತೆಗಳನ್ನು ರದ್ದುಪಡಿಸುವುದರ ಜೊತೆಗೆ ನಾಲ್ಕು ಅನಧಿಕೃತ ಕಟ್ಟಡಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ಈ ಸಂಬಂಧ ದಾಖಲೆಗಳೊಂದಿಗೆ ಜಿಬಿಎ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು (ಕಂದಾಯ) ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರಿಗೆ ಎನ್.ಆರ್. ರಮೇಶ್ ದೂರು ಸಲ್ಲಿಸಿದ್ದಾರೆ. ಇದೇ ಆರೋಪಗಳ ಕುರಿತು ಲೋಕಾಯುಕ್ತ ಐಜಿಪಿಗೂ ದೂರು ಸಲ್ಲಿಸಿ, ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಹಾಗೂ ನಕಲಿ ದಾಖಲೆ ತಯಾರಿಕೆ ಆರೋಪಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಇದನ್ನೂ ಓದಿ : ಲಂಚದ ಹೇಳಿಕೆ ವಿವಾದ ; ಸಚಿವ ಶಿವಲಿಂಗೇಗೌಡ ರಾಜೀನಾಮೆಗೆ ಆಗ್ರಹ.. ಲೋಕಾಯುಕ್ತಕ್ಕೆ ದೂರು!



















