ಬೆಂಗಳೂರು : ರಾಜ್ಯದಲ್ಲಿರುವ ಜೈಲುಗಳಲ್ಲಿ ಕಳೆದ 9 ತಿಂಗಳಲ್ಲಿ ಬರೋಬ್ಬರಿ 410 ಮೊಬೈಲ್‌ಗಳು ಪತ್ತೆಯಾಗಿದ್ದು, ಈ ಪೈಕಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ 334 ಮೊಬೈಲ್‌ಗಳು ಸೀಜ್ ಆಗಿವೆ. ಜೈಲಿನೊಳಗೆ ಅಕ್ರಮ ಚಟುವಟಿಕೆ ಹಾಗೂ ರಾಜಾತಿಥ್ಯಕ್ಕೆ ಕಡಿವಾಣ ಹಾಕಲು ನಿರಂತರ ದಾಳಿ ನಡೆಸಲಾಗುತ್ತಿದ್ದರೂ ಕೈದಿಗಳ ಮೊಬೈಲ್ ಬಳಕೆ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.
ವರ್ಷದಿಂದ ವರ್ಷಕ್ಕೆ ಜೈಲುಗಳಲ್ಲಿ ಪತ್ತೆಯಾಗುತ್ತಿರುವ ಮೊಬೈಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. 2023ರಲ್ಲಿ 72 ಮೊಬೈಲ್ ಹಾಗೂ 28 ಸಿಮ್ ಕಾರ್ಡ್‌ಗಳು ಪತ್ತೆಯಾಗಿದ್ದರೆ, 2024ರಲ್ಲಿ 104 ಮೊಬೈಲ್ ಮತ್ತು 10 ಸಿಮ್‌ಗಳು ಸೀಜ್ ಆಗಿದ್ದವು. 2025ರಲ್ಲಿ 148 ಮೊಬೈಲ್ ಹಾಗೂ 68 ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. 2026ರಲ್ಲಿ ಈ ಸಂಖ್ಯೆ ಬರೋಬ್ಬರಿ 410 ಮೊಬೈಲ್ ಮತ್ತು 228 ಸಿಮ್‌ಗಳಿಗೆ ಏರಿಕೆಯಾಗಿದೆ.
ಜೈಲಿನೊಳಗೆ ಮೊಬೈಲ್ ಬಳಕೆ ತಡೆಯಲು ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಅಕ್ರಮವಾಗಿ ಮೊಬೈಲ್ ಪೂರೈಕೆ ಅಥವಾ ಬಳಕೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ಜೈಲಾಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ. ಆದರೂ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ.
ಅಲೋಕ್ ಕುಮಾರ್ ಅವರ ಅವಧಿಯಲ್ಲಿ ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯ ಮೊಬೈಲ್‌ಗಳು ಸೀಜ್ ಆಗಿವೆ ಎನ್ನಲಾಗಿದ್ದು, ಸದ್ಯವೂ ಜೈಲಿನೊಳಗೆ ಇನ್ನೂ ಆರೇಳು ಮೊಬೈಲ್‌ಗಳು ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಜೈಲಾಧಿಕಾರಿಗಳಿಗೆ ಮತ್ತಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸುವಂತೆ ಸೂಚನೆ ನೀಡಲಾಗಿದ್ದು, ಜೈಲಿನೊಳಗೆ ನಡೆಯುತ್ತಿರುವ ಮೊಬೈಲ್ ಜಾಲದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ ; ವಿಐಪಿ ಗತ್ತು ಬಿಟ್ಟು ಮೆಟ್ರೋದಲ್ಲಿ ಸಚಿವ ಕೃಷ್ಣ ಬೈರೇಗೌಡ ಸಂಚಾರ!



















