ಬೆಂಗಳೂರು : ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ಬಳಕೆ ಜಾಸ್ತಿಯಾಗುತ್ತಿದೆ. ಅನವಶ್ಯಕವಾಗಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕೈಯಲ್ಲಿ ದುಡ್ಡು ಉಳಿಯುವುದಿಲ್ಲ ಎಂದು ಹೆಚ್ಚಿನ ಜನ ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡಿಸುತ್ತಾರೆ. ಆದರೆ, ಬ್ಯಾಂಕುಗಳು ಗ್ರಾಹಕರ ಮನವೊಲಿಸುವ ದೃಷ್ಟಿಯಿಂದ ಸುಲಭವಾಗಿ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದಿಲ್ಲ. ಆಗ ಗ್ರಾಹಕರು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನೀಡಿದ ಅಧಿಕಾರವನ್ನು ಬಳಸಿಕೊಳ್ಳಬಹುದು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ, ಗ್ರಾಹಕರು ಕ್ರೆಡಿಟ್ ಕಾರ್ಡ್ ಖಾತೆಯನ್ನು ಸ್ಥಗಿತಗೊಳಿಸಲು (Card Closure) ವಿನಂತಿ ಸಲ್ಲಿಸಿದ 7 ಕೆಲಸದ ದಿನಗಳೊಳಗೆ (7 working days) ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಯು ಆ ಕಾರ್ಡ್ ಅನ್ನು ರದ್ದುಗೊಳಿಸಬೇಕು. ಹಾಗೊಂದು ವೇಳೇ, ಬ್ಯಾಂಕ್ 7 ಕೆಲಸದ ದಿನಗಳ ಒಳಗೆ ಕ್ರೆಡಿಟ್ ಕಾರ್ಡ್ ಮುಚ್ಚದಿದ್ದರೆ, 8ನೇ ದಿನದಿಂದ ಅನ್ವಯವಾಗುವಂತೆ ಪ್ರತಿದಿನಕ್ಕೆ 500 ರೂಪಾಯಿ ದಂಡವನ್ನು ಗ್ರಾಹಕರಿಗೆ ಬ್ಯಾಂಕ್ ಪಾವತಿಸಬೇಕಾಗುತ್ತದೆ.
ಕಾರ್ಡ್ ಖಾತೆ ಮುಚ್ಚಿದ ನಂತರ, ಬ್ಯಾಂಕ್ ಆ ಕುರಿತು ಗ್ರಾಹಕರಿಗೆ ಎಸ್ಎಂಎಸ್ ಅಥವಾ ಇಮೇಲ್ ಮೂಲಕ ದೃಢೀಕರಣ ಸಂದೇಶವನ್ನು ಕಳುಹಿಸುವುದು ಕಡ್ಡಾಯವಾಗಿದೆ. ಆದರೆ, ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಬಾಕಿ ಹಣ (Dues), ಇಎಂಐ, ಅಥವಾ ದಂಡದ ಶುಲ್ಕಗಳು ಪೆಂಡಿಂಗ್ ಇದ್ದರೆ, ಈ 7 ದಿನಗಳ ನಿಯಮ ಅನ್ವಯಿಸುವುದಿಲ್ಲ. ಮೊದಲು ಎಲ್ಲಾ ಬಾಕಿ ಮೊತ್ತವನ್ನು ಚುಕ್ತಾ ಮಾಡಿದ ನಂತರವೇ ಕಾರ್ಡ್ ರದ್ದತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ದೂರು ನೀಡುವುದು ಹೇಗೆ?
ಒಂದು ವೇಳೆ ಬ್ಯಾಂಕ್ ವಿಳಂಬ ಮಾಡಿದರೂ ನಿಯಮಿತ ದಂಡದ ಮೊತ್ತವನ್ನು ನಿಮಗೆ ನೀಡದಿದ್ದರೆ, ನೀವು ಆರ್ಬಿಐನ ಬ್ಯಾಂಕಿಂಗ್ ಒಂಬುಡ್ಸ್ ಮನ್ (https://rbi.org.in/Scripts/Complaints.aspx) ಪೋರ್ಟಲ್ ಮೂಲಕ ದೂರು ನೀಡಬಹುದು. ಆರ್ಬಿ ಐ ಈ ವಿಷಯವನ್ನು ಪರಿಶೀಲಿಸಿ ಬ್ಯಾಂಕ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತದೆ.
ಇದನ್ನೂ ಓದಿ ; ನಿಮ್ಮ ಆಧಾರ್ ದುರ್ಬಳಕೆ ಆಗಿದೆಯೇ? ಮೋಸ ಹೋಗುವ ಮುನ್ನ ಹೀಗೆ ಚೆಕ್ ಮಾಡಿಕೊಳ್ಳಿ


















