ಬೆಂಗಳೂರು : ಆಧಾರ್ ಕಾರ್ಡ್ ಈಗ ದೇಶದ ಜನರ ಪ್ರಮುಖ ಗುರುತಿನ ಚೀಟಿಯಾಗಿದೆ. ಅಷ್ಟೇ ಅಲ್ಲ, ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರದ ಯಾವುದೇ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಬೇಕು. ಆದರೆ, ಇತ್ತೀಚೆಗೆ ಸೈಬರ್ ವಂಚನೆಗಳು ಜಾಸ್ತಿಯಾಗುತ್ತಿರುವ ಕಾರಣ ಜನ ಎಚ್ಚರಿಕೆಯಿಂದ ಇರಬೇಕಾಗಿದೆ. ಅದರಲ್ಲೂ, ನಿಮ್ಮ ಹೆಸರಿನಲ್ಲಿ ಅಥವಾ ನಿಮ್ಮ ಆಧಾರ್ ಕಾರ್ಡ್ ಬಳಸಿ ಯಾರಾದರೂ ನಿಮಗೇ ತಿಳಿಯದಂತೆ ಸಿಮ್ ಕಾರ್ಡ್ ಪಡೆದುಕೊಂಡಿದ್ದಾರೆಯೇ ಎಂದು ತಿಳಿಯುವುದು ಮುಖ್ಯ.
ಟೆಲಿಕಾಂ ಇಲಾಖೆ ನೀತಿಯ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಗರಿಷ್ಠ 9 ಮೊಬೈಲ್ ಸಂಪರ್ಕಗಳನ್ನು ಹೊಂದಬಹುದು. ಈಗ ಅನಧಿಕೃತ ಸಿಮ್ ಸಂಪರ್ಕಗಳನ್ನು ಪತ್ತೆಹಚ್ಚಲು ಮತ್ತು ಅವುಗಳನ್ನು ವರದಿ ಮಾಡಲು ಕೇಂದ್ರ ಸರ್ಕಾರವು ಸಂಚಾರ್ ಸಾಥಿ ಪೋರ್ಟಲ್ ಅನ್ನು ಪರಿಚಯಿಸಿದೆ. ಇದರ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ಬಳಸಿ ಯಾರಾದರೂ ಸಿಮ್ ಕಾರ್ಡ್ ಪಡೆದಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಬಹುದು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಂಬರ್, ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳು ಸೇರಿ ಹಲವು ಆನ್ ಲೈನ್ ಸೇವೆಗಳಿಗೆ ಆಧಾರ್ ಲಿಂಕ್ ಆಗಿರುತ್ತದೆ. ಹಾಗಾಗಿ, ನಿಮ್ಮ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಯಾರಾದರೂ ಅನಧಿಕೃತ ಸಿಮ್ ಪಡೆದಿದ್ದರೆ, ಅದನ್ನು ಸೈಬರ್ ವಂಚನೆ ಅಥವಾ ಅಕ್ರಮ ಚಟುವಟಿಕೆಗಳಿಗೆ ಬಳಸುವ ಅಪಾಯವಿರುತ್ತದೆ. ಇದರಿಂದ ತೊಂದರೆಗೆ ಸಿಲುಕುವುದನ್ನು ತಪ್ಪಿಸಲು ನಿಮ್ಮ ಹೆಸರಿನಲ್ಲಿರುವ ಸಿಮ್ ಸಂಖ್ಯೆಗಳನ್ನು ಪರಿಶೀಲಿಸುವುದು ಅಗತ್ಯ.
ಪತ್ತೆಹಚ್ಚುವುದು ಹೇಗೆ?
ಸಂಚಾರ್ ಸಾಥಿ ಅಧಿಕೃತ ವೆಬ್ ಸೈಟ್ ಗೆ (sancharsaathi.gov.in) ಭೇಟಿ ನೀಡಿ TAFCOP ವಿಭಾಗವನ್ನು ಆಯ್ಕೆ ಮಾಡಿ. ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಪರದೆಯ ಮೇಲಿರುವ Captcha ನಮೂದಿಸಿ, ನಿಮ್ಮ ಫೋನ್ ಗೆ ಬರುವ OTP ಯನ್ನು ನಮೂದಿಸಿ ಪರಿಶೀಲಿಸಿ. ಪರಿಶೀಲನೆಯ ನಂತರ, ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿ ಕಾಣಿಸುತ್ತದೆ.
ಅನಧಿಕೃತ ಸಂಖ್ಯೆ ಇದ್ದರೆ ಏನು ಮಾಡಬೇಕು?
ಪಟ್ಟಿಯಲ್ಲಿರುವ ಸಂಖ್ಯೆಗಳಲ್ಲಿ ಯಾವುದಾದರೂ ನಿಮಗೆ ಸೇರಿಲ್ಲದಿದ್ದರೆ ಅಥವಾ ಅನಗತ್ಯವಾಗಿದ್ದರೆ, ಅದನ್ನು ಪೋರ್ಟಲ್ ನಲ್ಲೇ ಗುರುತಿಸಿ “Not My Number” (ಇದು ನನ್ನ ಸಂಖ್ಯೆಯಲ್ಲ) ಅಥವಾ “Not Required” (ಅಗತ್ಯವಿಲ್ಲ) ಎಂದು ವರದಿ (Report) ಮಾಡಬಹುದು. ವರದಿ ಮಾಡಿದ ನಂತರ ಟೆಲಿಕಾಂ ಕಂಪನಿಗಳು ಆ ಸಿಮ್ ಸಂಪರ್ಕವನ್ನು ಪರಿಶೀಲಿಸಿ ರದ್ದುಗೊಳಿಸುತ್ತವೆ.
ಇದನ್ನೂ ಓದಿ : ಒಂದೇ ಪಂದ್ಯ ಆಡಿದ ಬೆನ್ನಲ್ಲೇ ಗಾಯ ; ವರುಣ್ ಚಕ್ರವರ್ತಿ ಸರಣಿಯಿಂದ ಔಟ್.. BCCI ವೈದ್ಯಕೀಯ ನಿರ್ವಹಣೆ ಬಗ್ಗೆ ಪ್ರಶ್ನೆ!


















