ಹಾಸನ : ಲಾಡ್ಜ್‌ನಲ್ಲಿ ಬೆಂಗಳೂರಿನ ಮೂಲದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿ ನಡೆದಿದೆ. ಬೆಂಗಳೂರಿನ ನಿವಾಸಿ ವರ್ಷಾ (23) ಮೃತ ಯುವತಿ ಎಂದು ಗುರುತಿಸಲಾಗಿದೆ. ಯುವತಿ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

ವರ್ಷಾ ತನ್ನ ಸ್ನೇಹಿತರಾದ ರಘು ಹಾಗೂ ದರ್ಶನ್ ಜೊತೆ ಪ್ರವಾಸಕ್ಕೆ ಸಕಲೇಶಪುರಕ್ಕೆ ಬಂದಿದ್ದರು. ಶುಕ್ರವಾರ ಪ್ರವಾಸಕ್ಕೆ ಆಗಮಿಸಿದ್ದ ಮೂವರು ಕಳೆದ ನಾಲ್ಕು ದಿನಗಳಿಂದ ಸಕಲೇಶಪುರದ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿದ್ದರು ಎನ್ನಲಾಗಿದೆ.
ಪ್ರವಾಸದ ವೇಳೆ ವರ್ಷಾ, ರಘು ಮತ್ತು ದರ್ಶನ್ ಒಂದೇ ಲಾಡ್ಜ್‌ನ ಒಂದೇ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಇದೀಗ ಅದೇ ಕೊಠಡಿಯಲ್ಲಿ ವರ್ಷಾ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಯುವತಿಯ ಸಾವಿಗೆ ನಿಖರ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆ ಸಂಬಂಧ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ವರ್ಷಾ ಜೊತೆಗಿದ್ದ ರಘು ಹಾಗೂ ದರ್ಶನ್ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಸಾವಿನ ಹಿಂದಿನ ಕಾರಣ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕೊನೆಗೂ ‘ಸುಡೊ ನಕ್ಸಲ್’ ವೆಂಕಟೇಶ್ ಬಂಧನ!



















