ಬೆಂಗಳೂರು : ದೇಶದಲ್ಲಿ ಹಬ್ಬಗಳ ಸೀಸನ್ ಶುರುವಾಗಿದೆ. ಬಟ್ಟೆ, ಮೊಬೈಲ್ ಸೇರಿ ಹತ್ತಾರು ವಸ್ತುಗಳನ್ನು ಆನ್ ಲೈನ್ ಮೂಲಕವೇ ಕೋಟ್ಯಂತರ ಗ್ರಾಹಕರು ಖರೀದಿಸುತ್ತಾರೆ. ಇದಕ್ಕಾಗಿಯೇ ಇ-ಕಾಮರ್ಸ್ ಸಂಸ್ಥೆಗಳು ಭಾರಿ ಡಿಸ್ಕೌಂಟ್ ನೀಡುತ್ತಿವೆ. ಇದರ ಬೆನ್ನಲ್ಲೇ, ಆನ್ ಲೈನ್ ಮೂಲಕ ಖರೀದಿಸುವ ಗ್ರಾಹಕರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ, ಡಿಸ್ಕೌಂಟ್ ಹೆಸರಿನಲ್ಲಿ ಗ್ರಾಹಕರಿಗೆ ಮೋಸ ಮಾಡಬಾರದು ಎಂಬುದು ಹೊಸ ನಿಯಮಗಳಲ್ಲಿ ಪ್ರಮುಖವಾಗಿದೆ.
ಕೇಂದ್ರ ಸರ್ಕಾರವು 2020ರ ಗ್ರಾಹಕರ ರಕ್ಷಣೆ ನಿಯಮಗಳಿಗೆ ತಿದ್ದುಪಡಿ ಮಾಡಿದೆ. ಗ್ರಾಹಕರ ರಕ್ಷಣೆಗಾಗಿ ಹೊಸ ನಿಯಮಗಳನ್ನು ರೂಪಿಸಿದ್ದು, ಇವು 2027ರ ಜನವರಿ 1ರಿಂದ ಜಾರಿಗೆ ಬರಲಿವೆ. ಹಾಗಾದರೆ, ಹೊಸ ನಿಯಮಗಳು ಏನು? ಇವುಗಳಿಂದ ಗ್ರಾಹಕರಿಗೆ ಏನೆಲ್ಲ ಅನುಕೂಲ ಇವೆ ಎಂಬುದನ್ನು ತಿಳಿಯೋಣ ಬನ್ನಿ.
- ಬೆಲೆ ಪಾರದರ್ಶಕತೆ ಮತ್ತು ರಿಯಾಯಿತಿ
ಆನ್ ಲೈನ್ ನಲ್ಲಿ ಡಿಸ್ಕೌಂಟ್ (ರಿಯಾಯಿತಿ) ಪ್ರಕಟಿಸುವಾಗ ಕಂಪನಿಗಳು ರಿಯಾಯಿತಿ ದರದ ಜತೆಗೆ ಹಿಂದಿನ ಬೆಲೆಯನ್ನೂ ಕಡ್ಡಾಯವಾಗಿ ಪ್ರದರ್ಶಿಸಬೇಕು. ಅಂದರೆ, ರಿಯಾಯಿತಿ ನೀಡುವ ಮುನ್ನ ಕಳೆದ 30 ದಿನಗಳಲ್ಲಿ ಆ ವಸ್ತುವಿಗೆ ಇದ್ದ ಅತಿ ಕಡಿಮೆ ಬೆಲೆಯನ್ನು ಉಲ್ಲೇಖಿಸಬೇಕಾಗುತ್ತದೆ. - ಸರ್ಚ್ ರಿಸಲ್ಟ್ ಗಳ ಮೇಲಿನ ನಿಯಂತ್ರಣ
ಪ್ಲಾಟ್ ಫಾರ್ಮ್ ಗಳು ಸರ್ಚ್ ರಿಸಲ್ಟ್ ಗಳನ್ನು ತಮಗೆ ಬೇಕಾದಂತೆ ಬದಲಾಯಿಸಿ ಗ್ರಾಹಕರನ್ನು ದಾರಿತಪ್ಪಿಸುವಂತಿಲ್ಲ. ಪ್ರಾಯೋಜಿತ ಅಥವಾ ಜಾಹೀರಾತು ಆಧಾರಿತ ಉತ್ಪನ್ನಗಳಿದ್ದರೆ ಅವುಗಳನ್ನು ‘Sponsored’ ಎಂದು ಸ್ಪಷ್ಟವಾಗಿ ಗುರುತಿಸಬೇಕು. - ಡಾರ್ಕ್ ಪ್ಯಾಟರ್ನ್ ತಡೆ ಮತ್ತು ಆಡಿಟ್
ಗ್ರಾಹಕರನ್ನು ವಂಚಿಸುವ ತಂತ್ರಗಳಾದ Dark Patterns ಅಥವಾ ತಪ್ಪು ಮಾಹಿತಿ, ಆಫರ್ ಗಳು ಸೇರಿ ಇತ್ಯಾದಿಗಳನ್ನು ಸಂಪೂರ್ಣವಾಗಿ ತಡೆಯಬೇಕು. ಇ-ಕಾಮರ್ಸ್ ಕಂಪನಿಗಳು ಪ್ರತಿ ವರ್ಷ ಸ್ವಯಂ ಆಡಿಟ್ ನಡೆಸಿ, ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಪ್ರಮಾಣಪತ್ರವನ್ನು ಪ್ರದರ್ಶಿಸಬೇಕು. - ಗ್ರಾಹಕರ ದೂರು ಸಲ್ಲಿಕೆ
ಗ್ರಾಹಕರು ದೂರು ನೀಡಿದಾಗ, ಕುಂದುಕೊರತೆ ನಿವಾರಣೆ ಅಧಿಕಾರಿ ದಾಖಲಿಸಿಕೊಂಡ ದೂರಿನ ಪ್ರತಿಯನ್ನು ಗ್ರಾಹಕರಿಗೆ ನೀಡಬೇಕು. ಅಲ್ಲದೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಜತೆ ಇ-ಕಾಮರ್ಸ್ ಸಂಸ್ಥೆಗಳು ಕಡ್ಡಾಯವಾಗಿ ಸಂಯೋಜನೆಗೊಳ್ಳಬೇಕು. - ಗ್ರಾಹಕರ ಡೇಟಾ ಸುರಕ್ಷತೆ
ಗ್ರಾಹಕರ ಸ್ಪಷ್ಟ ಅನುಮತಿಯಿಲ್ಲದೆ ಅವರ ವೈಯಕ್ತಿಕ ಮಾಹಿತಿಯನ್ನು (Data) ಇತರ ಉದ್ದೇಶಗಳಿಗೆ ಬಳಸುವಂತಿಲ್ಲ. ಜತೆಗೆ, ಅನಗತ್ಯ ಸೇವೆಗಳಿಗೆ ಬಂಡಲ್ ಶುಲ್ಕ ವಿಧಿಸುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ : ನಾಡಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮ ; ಕೆ.ಆರ್ ಮಾರ್ಕೆಟ್‌ನಲ್ಲಿ ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ!



















