ನವದೆಹಲಿ : ಮರಣದಂಡನೆಗೆ ಗುರಿಯಾದ ಕೈದಿಗಳನ್ನು ನೇಣಿಗೇರಿಸುವ ಪ್ರಸ್ತುತ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆದರೂ, ಮರಣದಂಡನೆ ಜಾರಿಗೊಳಿಸುವಾಗ ಅನುಭವಿಸುವ ವೇದನೆ ಮತ್ತು ಯಾತನೆಯನ್ನು ತಗ್ಗಿಸಿ ಗೌರವಯುತ ಸಾವು ನೀಡಲು ಯಾವುದೇ ಪರ್ಯಾಯ ಮಾರ್ಗಗಳಿವೆಯೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಮುಕ್ತ ಅವಕಾಶ ನೀಡಿದೆ.
ಸಿಆರ್‌ಪಿಸಿ ಸೆಕ್ಷನ್ 354(5) ರದ್ದತಿಗೆ ನಿರಾಕರಣೆ
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠವು ಈ ಪ್ರಮುಖ ತೀರ್ಪನ್ನು ಪ್ರಕಟಿಸಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 354(5), ಮರಣದಂಡನೆ ವಿಧಿಸಲ್ಪಟ್ಟ ಕೈದಿಯನ್ನು “ಸಾಯುವವರೆಗೆ ಕೊರಳಿನಿಂದ ನೇಣು ಹಾಕಬೇಕು” ಎಂದು ನಿರ್ದೇಶಿಸುತ್ತದೆ. ಈ ಕಾಯ್ದೆಯು ಸಂವಿಧಾನಬಾಹಿರ ಎಂದು ವಾದಿಸಿ ಹಿರಿಯ ವಕೀಲ ರಿಷಿ ಮಲ್ಹೋತ್ರಾ ಅವರು ಅರ್ಜಿ ಸಲ್ಲಿಸಿದ್ದರು. ನೇಣಿಗೇರಿಸುವ ಪ್ರಕ್ರಿಯೆಯು ಅಮಾನವೀಯವಾಗಿದ್ದು, ಸಾವು ಸಂಭವಿಸಲು ಸುಮಾರು 40 ನಿಮಿಷಗಳಿಗಿಂತ ಹೆಚ್ಚು ಸಮಯ ತಗೆದುಕೊಳ್ಳುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ವಿಷಕಾರಿ ಚುಚ್ಚುಮದ್ದು ಹಾಗೂ ಪರ್ಯಾಯಗಳ ವಾದ
ನೇಣು ಶಿಕ್ಷೆಯ ಬದಲಿಗೆ ವಿಷಕಾರಿ ಚುಚ್ಚುಮದ್ದು (Lethal Injection), ಗುಂಡಿಕ್ಕುವುದು, ವಿದ್ಯುತ್ ಸ್ಪರ್ಶ ಅಥವಾ ಗ್ಯಾಸ್ ಚೇಂಬರ್‌ನಂತಹ ಕ್ಷಿಪ್ರ ಹಾಗೂ ಕಡಿಮೆ ಯಾತನೆ ನೀಡುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದರು. ಅಮೆರಿಕದಂತಹ ದೇಶಗಳಲ್ಲಿ ಕೈದಿಗಳಿಗೆ ಪರ್ಯಾಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಆದರೆ, ‘ಪ್ರಾಜೆಕ್ಟ್ 39ಎ’ ನಂತಹ ಸಂಸ್ಥೆಗಳು ವಿಷಕಾರಿ ಚುಚ್ಚುಮದ್ದು ಪ್ರಾಯೋಗಿಕವಾಗಿ ಸಂಪೂರ್ಣವಾಗಿ ನೋವುರಹಿತ ಅಥವಾ ಯಶಸ್ವಿ ಎಂದು ಸಾಬೀತಾಗಿಲ್ಲ ಎಂಬ ವಾದವನ್ನು ಮಂಡಿಸಿದವು.
ತಜ್ಞರ ಸಮಿತಿ ಪರಿಶೀಲನೆಗೆ ಅವಕಾಶ
ಅರ್ಜಿಯನ್ನು ವಜಾಗೊಳಿಸಿದರೂ, ಭವಿಷ್ಯದಲ್ಲಿ ಬಲವಾದ ವೈಜ್ಞಾನಿಕ ಅಥವಾ ವೈದ್ಯಕೀಯ ಸಾಕ್ಷ್ಯಗಳು ಲಭ್ಯವಾದರೆ ಈ ವಿಷಯದ ಮರುಪರಿಶೀಲನೆಗೆ ಯಾವುದೇ ತಡೆಯಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದಲ್ಲದೆ, ಕೇಂದ್ರ ಸರ್ಕಾರವು ತಜ್ಞರ ಸಮಿತಿಯ ಮೂಲಕ ಅತ್ಯಂತ ಸೂಕ್ತ ಹಾಗೂ ಯಾತನಾರಹಿತ ಪರ್ಯಾಯ ವಿಧಾನಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ಸ್ವತಂತ್ರವಾಗಿದೆ ಎಂದು ತಿಳಿಸಿದೆ. ಈ ವಿಷಯವನ್ನು ಸರ್ಕಾರವು ಅತ್ಯುನ್ನತ ಮಟ್ಟದಲ್ಲಿ ಪರಿಶೀಲಿಸುತ್ತಿದೆ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ : ಆಧಾರ್‌ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ? ಸ್ಟೆಪ್ ಬೈ ಸ್ಟೆಪ್ ಗೈಡೆನ್ಸ್ ಇಲ್ಲಿದೆ



















