ಅಯೋಧ್ಯೆ : ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿನ ಹುಂಡಿ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಅವರಿಗೆ ವಿಶೇಷ ತನಿಖಾ ತಂಡ (SIT) ಕ್ಲೀನ್ ಚಿಟ್ ನೀಡಿದೆ. ಈ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಬ್ಬರೂ ಜೂನ್ 27 ರಂದು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಪ್ರಕರಣದ ಸುದೀರ್ಘ ತನಿಖೆ ನಡೆಸಿದ ಎಸ್‌ಐಟಿ, ಪ್ರಸ್ತುತ ಅಂತಿಮ ವರದಿಯನ್ನು ಮುಂದಿನ ಕ್ರಮಕ್ಕಾಗಿ ಉತ್ತರ ಪ್ರದೇಶದ ಗೃಹ ಇಲಾಖೆಯ ಮೂಲಕ ರಾಮಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಿದೆ.
ಖುದ್ದಾಗಿ ದೂರು ನೀಡಿದ್ದಾಗಿ ತಿಳಿಸಿದ್ದ ಚಂಪತ್ ರಾಯ್
ತನಿಖೆಯ ವೇಳೆ ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದ ಚಂಪತ್ ರಾಯ್, ತಾವು ಈ ಅಕ್ರಮದಲ್ಲಿ ಯಾವುದೇ ಭಾಗಿಯಿಲ್ಲ ಎಂದು ಸ್ಪಷ್ಟಪಡಿಸಿದ್ದರು. ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ತಮ್ಮ ಜವಾಬ್ದಾರಿಯಾಗಿದ್ದು, ಅಕ್ರಮದ ವಿಚಾರ ತಿಳಿಯುತ್ತಿದ್ದಂತೆ ತಾವೇ ಖುದ್ದಾಗಿ ದೂರು ನೀಡಿದ್ದರಿಂದ ಆರೋಪಿಗಳ ಬಂಧನ ಸಾಧ್ಯವಾಯಿತು ಎಂದು ಅವರು ತನಿಖಾಧಿಕಾರಿಗಳಿಗೆ ತಿಳಿಸಿದ್ದರು.
ಲಖನೌ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ನೇತೃತ್ವದ ಮೂವರು ಸದಸ್ಯರ ಎಸ್‌ಐಟಿ ತಂಡವು ಜೂನ್ 13 ರಿಂದ ಈ ಪ್ರಕರಣದ ತನಿಖೆ ನಡೆಸಿತ್ತು. ಜೂನ್ ಆರಂಭದಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಹರಿದುಬಂದ ದೇಣಿಗೆ ಹಣದ ಎಣಿಕೆಯಲ್ಲಿ ವ್ಯತ್ಯಾಸಗಳು ಕಂಡುಬಂದಾಗ ಈ ವಿವಾದ ಬೆಳಕಿಗೆ ಬಂದಿತ್ತು. ಟ್ರಸ್ಟ್‌ನ ಮನವಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿತ್ತು. ಎಸ್‌ಐಟಿ ನೀಡಿದ ಪ್ರಾಥಮಿಕ ವರದಿಯ ಆಧಾರದ ಮೇಲೆ ಟ್ರಸ್ಟ್ ಸದಸ್ಯ ಕೃಷ್ಣಮೋಹನ್ ಅವರು ಜೂನ್ 25 ರಂದು ಪೊಲೀಸರಿಗೆ ದೂರು ನೀಡಿದ್ದರು. ನಂತರ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿತ್ತು.
ಎಂಟು ಆರೋಪಿಗಳ ಬಂಧನ
ಕೈಯಿಂದ ನಗದು ಎಣಿಕೆ ಮಾಡುವ ಸಂದರ್ಭದಲ್ಲಿ ಕಳವು ನಡೆದಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವಿನಾಶ್ ಶುಕ್ಲಾ, ಅನುಕಲ್ಪ ಮಿಶ್ರಾ, ಲವ್‌ಕುಶ್ ಮಿಶ್ರಾ ಸೇರಿದಂತೆ ಒಟ್ಟು ಎಂಟು ಮಂದಿ ಮುಖ್ಯ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಕಳವಿನಲ್ಲಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ಯಾವುದೇ ಹಸ್ತಕ್ಷೇಪವಿಲ್ಲದಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಇದನ್ನೂ ಓದಿ : ಅಮೆರಿಕ ಚುನಾವಣಾ ಸುಧಾರಣೆಗೆ ಭಾರತವೇ ಮಾದರಿ : ‘ಸೇವ್ ಅಮೆರಿಕ ಆಕ್ಟ್’ ಪರ ಟ್ರಂಪ್ ವಾದ



















