ಬೆಂಗಳೂರು : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಂದು (ಆ.8 ಮಂಗಳವಾರ) ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಮಹಿಳಾ ಕೈದಿಗಳ ಸ್ಥಿತಿ, ಅವರಿಗೆ ದೊರೆಯುತ್ತಿರುವ ಸೌಲಭ್ಯಗಳು ಹಾಗೂ ಜೈಲಿನಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ.
ಇನ್ನು, ಮಹಿಳಾ ಆಯೋಗದ ಕಾಯ್ದೆಯ ಸೆಕ್ಷನ್ 9(g) ಅಡಿಯಲ್ಲಿ ಮಹಿಳಾ ಕೈದಿಗಳ ಅಹವಾಲುಗಳು ಮತ್ತು ಮನವಿಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಲಾಗುತ್ತದೆ. ಮಹಿಳಾ ಕೈದಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳು, ಅಗತ್ಯ ಸೌಲಭ್ಯಗಳು ಹಾಗೂ ಅವರ ಕುಂದುಕೊರತೆಗಳ ಬಗ್ಗೆ ಅಧ್ಯಕ್ಷರು ಮಾಹಿತಿ ಪಡೆಯಲಿದ್ದಾರೆ.
ಪರಿಶೀಲನಾ ಭೇಟಿಯ ಸಂದರ್ಭದಲ್ಲಿ ನಾಗಲಕ್ಷ್ಮಿ ಚೌಧರಿ ಅವರು ಜೈಲಿನ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಿದ್ದಾರೆ. ಮಹಿಳಾ ಕೈದಿಗಳಿಗೆ ಒದಗಿಸಲಾಗುತ್ತಿರುವ ಮೂಲಸೌಕರ್ಯ, ಆರೋಗ್ಯ ಸೇರಿದಂತೆ ಅಗತ್ಯ ಸೌಲಭ್ಯಗಳು ಹಾಗೂ ಅವರ ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.
ಇನ್ನು, ಈ ಪರಿಶೀಲನಾ ಭೇಟಿಯ ವೇಳೆ ಗಮನಕ್ಕೆ ಬಂದಿರುವ ಅಂಶಗಳು ಹಾಗೂ ಮಹಿಳಾ ಕೈದಿಗಳಿಗೆ ಜೈಲಿನಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಇಂದು ಸಂಜೆ 4 ಗಂಟೆಗೆ ವಿಶೇಷ ಸುದ್ದಿಗೋಷ್ಠಿಯನ್ನೂ ಆಯೋಜಿಸಲಾಗಿದೆ. ಬೆಂಗಳೂರಿನ ಕಾವೇರಿ ಭವನದಲ್ಲಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಚೇರಿಯಲ್ಲಿ ಈ ಸುದ್ದಿಗೋಷ್ಠಿ ನಡೆಯಲಿದೆ.
ಇದನ್ನೂ ಓದಿ : ಮರವಂತೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿದ ನಾಗರ ಪಂಚಮಿ ಸಂಭ್ರಮ



















