ಬೆಂಗಳೂರು : ಗೊಟ್ಟಿಗೆರೆ ಬಳಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅರುಣ್ ಎಂಬವರ ಮೇಲೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ನಲಾದ ಗೊಟ್ಟಿಗೆರೆ ಮಂಜು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಗೊಟ್ಟಿಗೆರೆ ಬಳಿ ಟ್ರಾಫಿಕ್ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಮಂಜು ಅವರ ವಾಹನವನ್ನು ಪೊಲೀಸರು ತಡೆದಿದ್ದು, ಈ ವೇಳೆ “ನನ್ನ ಗಾಡಿಯನ್ನೇ ಸ್ಟಾಪ್ ಮಾಡ್ತೀಯಾ” ಎಂದು ಆಕ್ರೋಶಗೊಂಡ ಮಂಜು, ಟ್ರಾಫಿಕ್ ಸಿಬ್ಬಂದಿ ಅರುಣ್ ಅವರೊಂದಿಗೆ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಅರುಣ್ ಅವರ ಕೊರಳಪಟ್ಟಿ ಹಿಡಿದು ಹಲ್ಲೆಗೆ ಮುಂದಾಗಿರುವ ಆರೋಪ ಕೇಳಿಬಂದಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ.
ಇಷ್ಟೇ ಅಲ್ಲದೆ, ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಕಾಲಿನಿಂದ ಹೊಡೆಯಲು ಮಂಜು ಮುಂದಾಗಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆಯೇ ರಾಜಕೀಯ ಹಿನ್ನೆಲೆಯ ಪ್ರಭಾವ ತೋರಿಸಿ ದರ್ಪದಿಂದ ವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಮುಂದಾಗಿರುವ ಆರೋಪದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಇದನ್ನೂ ಓದಿ : ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಭಾವುಕ ; ಪಕ್ಷ ತೊರೆಯುವ ಸುಳಿವು?


















