ಬೆಂಗಳೂರು : ನಗರದ ಹೆಣ್ಣೂರು-ಬಾಣಸವಾಡಿ ಭಾಗದಲ್ಲಿರುವ ಕಾಸ್ಮೋಪಾಲಿಟನ್ ಕ್ಲಬ್‌ನಲ್ಲಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ತರುವಂತಹ ಘಟನೆ ಬೆಳಕಿಗೆ ಬಂದಿದೆ. ಕ್ಲಬ್‌ನ ಲೇಡಿಸ್ ಟಾಯ್ಲೆಟ್ ಹಾಗೂ ಈಜುಕೊಳದ ಡ್ರೆಸ್ಸಿಂಗ್-ಚೇಂಜಿಂಗ್ ರೂಮ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಪತ್ತೆಯಾಗಿವೆ ಎಂಬ ಆರೋಪ ಕೇಳಿಬಂದಿದೆ. ಸಿಸಿಟಿವಿ ಇರುವುದನ್ನು ಗಮನಿಸಿದ ಕ್ಲಬ್‌ನ ಮಹಿಳಾ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 15 ದಿನಗಳ ಹಿಂದಷ್ಟೇ ಕ್ಲಬ್‌ನ ಈಜುಕೊಳವನ್ನು ತೆರೆಯಲಾಗಿತ್ತು ಎನ್ನಲಾಗಿದೆ. ಈಜುಕೊಳ ಬಳಸಲು ತೆರಳಿದ್ದ ಸುಮಾರು 15 ವರ್ಷದ ಬಾಲಕಿ ಹಾಗೂ ಆಕೆಯ ತಾಯಿ ಬಟ್ಟೆ ಬದಲಿಸಲು ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ ವೇಳೆ ಸಿಸಿಟಿವಿ ಕ್ಯಾಮೆರಾ ಇರುವುದನ್ನು ಗಮನಿಸಿ ಗಾಬರಿಗೊಂಡಿದ್ದಾರೆ. ಮಹಿಳೆಯರು ಮತ್ತು ಬಾಲಕಿಯರು ಬಟ್ಟೆ ಬದಲಿಸುವಂತಹ ಖಾಸಗಿ ಸ್ಥಳದಲ್ಲೇ ಸಿಸಿಟಿವಿ ಅಳವಡಿಸಿರುವುದು ಹೇಗೆ ಎಂಬ ಪ್ರಶ್ನೆ ಇದೀಗ ಎದ್ದಿದೆ.
ಘಟನೆ ಬಗ್ಗೆ ಮಹಿಳಾ ಸದಸ್ಯರು ಕ್ಲಬ್ ಆಡಳಿತ ಮಂಡಳಿಗೆ ದೂರು ನೀಡಿದ್ದು, ಸಿಸಿಟಿವಿ ಅಳವಡಿಸಿರುವ ಬಗ್ಗೆ ಆಡಳಿತ ಮಂಡಳಿಗೆ ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದ್ದಾರೆ. ಮಹಿಳೆಯರು ಹಾಗೂ ಬಾಲಕಿಯರು ಬಳಸುವ ಸ್ಥಳದಲ್ಲಿ ಇಂತಹ ಕ್ಯಾಮೆರಾ ಅಳವಡಿಸಿರುವುದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮಹಿಳಾ ಸದಸ್ಯರು ಆಗ್ರಹಿಸಿದ್ದಾರೆ.
ಇನ್ನು ಘಟನೆ ಸಂಬಂಧ ಕ್ಲಬ್‌ನ ಸೆಕ್ರೆಟರಿ ಪ್ರಶಾಂತ್ ರೆಡ್ಡಿ ವಿರುದ್ಧವೂ ಮಹಿಳಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿರುವ ಬಗ್ಗೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕು ಹಾಗೂ ಕ್ಯಾಮೆರಾಗಳನ್ನು ಯಾರು ಅಳವಡಿಸಿದರು, ಅವುಗಳ ದೃಶ್ಯಗಳು ಎಲ್ಲಿಗೆ ಹೋಗುತ್ತಿವೆ ಎಂಬುದನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಘಟನೆ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಮಹಿಳೆಯರು ಮುಂದಾಗಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು, ಅವುಗಳ ದಾಖಲೆಗಳನ್ನು ಪರಿಶೀಲಿಸುವುದರ ಜೊತೆಗೆ ಕ್ಯಾಮೆರಾಗಳನ್ನು ಅಳವಡಿಸಿದವರು ಯಾರು ಮತ್ತು ದೃಶ್ಯಗಳನ್ನು ಸಂಗ್ರಹಿಸಲಾಗುತ್ತಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ.
ಇದನ್ನೂ ಓದಿ : ಐಪಿಎಲ್ ಆಡಲ್ಲ ಎಂದಿದ್ದ ಹ್ಯಾರಿ ಬ್ರೂಕ್ ಯೂ-ಟರ್ನ್ ; ಸುಳಿವು ನೀಡಿದ ಇಂಗ್ಲೆಂಡ್ ಸ್ಟಾರ್



















