ಬೆಂಗಳೂರು: ಡೆಲಿವರಿ ಬಾಯ್ ಮೇಲೆ ಮೂವರು ಸೇರಿ ಹಲ್ಲೆ ನಡೆಸಿರುವ ಆರೋಪ ಬೆಂಗಳೂರಿನ ಯಲಹಂಕದಲ್ಲಿ ಕೇಳಿಬಂದಿದೆ.
ಇಂದು ಬೆಳಗಿನ ಜಾವ ಯಲಹಂಕದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಡೆಲಿವರಿ ಮಾಡಲು ಬಂದಿದ್ದ ಯುವಕನ ಮೇಲೆ ಒರ್ವ ಯುವತಿ ಸೇರಿದಂತೆ ಮೂವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹಲ್ಲೆ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇನ್ನು ಹಿಂದಿಯಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಡೆಲಿವರಿ ಬಾಯ್ ಹಾಗೂ ಮೂವರ ನಡುವೆ ಮಾತಿನ ಚಕಮಕಿ ನಡೆದ ಬಳಿಕ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



















