ಬೆಂಗಳೂರು : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಮ್ ಇಂಡಿಯಾದ ಆಟಗಾರರ ಫಿಟ್ನೆಸ್ ನೀತಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಆಟಗಾರರು ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವುದು ಹಾಗೂ ಫಿಟ್ನೆಸ್ ಮಟ್ಟದಲ್ಲಿ ಕುಸಿತ ಕಂಡುಬಂದಿರುವುದು ಮಂಡಳಿಯ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಈ ನಿಟ್ಟಿನಲ್ಲಿ, ತಂಡದ ಎಲ್ಲಾ ಆಟಗಾರರಿಗೂ ಏಕರೂಪದ ಫಿಟ್ನೆಸ್ ಮಾನದಂಡಗಳನ್ನು ಕಡ್ಡಾಯಗೊಳಿಸಲು ಬಿಸಿಸಿಐ ತೀರ್ಮಾನಿಸಿದೆ. ಆಟಗಾರರ ಗಾಯದ ಸಮಸ್ಯೆಗಳ ಮೂಲ ಕಾರಣವನ್ನು ಹುಡುಕಲು ಹೊರಟಾಗ, ಪ್ರಸ್ತುತ ಬಳಸಲಾಗುತ್ತಿರುವ ‘ಬ್ರಾಂಕೋ ಟೆಸ್ಟ್’ ಆಟಗಾರರ ಫಿಟ್ನೆಸ್ ಅನ್ನು ನಿಖರವಾಗಿ ಅಳೆಯಲು ಸೂಕ್ತವಾದ ಮತ್ತು ನಿರ್ದಿಷ್ಟವಾದ ಮಾನದಂಡಗಳನ್ನು ಹೊಂದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಹಳೆಯ ಮತ್ತು ಹೊಸ ಫಿಟ್ನೆಸ್ ಪರೀಕ್ಷೆಗಳ ನಡುವಿನ ವ್ಯತ್ಯಾಸ
ವರದಿಗಳ ಪ್ರಕಾರ, ಬಿಸಿಸಿಐ ವೈದ್ಯಕೀಯ ತಂಡವು ಈಗ ಆಟಗಾರನೊಬ್ಬ ಪಂದ್ಯಕ್ಕೆ ಸಿದ್ಧನಿದ್ದಾನೆಯೇ ಎಂಬುದನ್ನು ನಿರ್ಧರಿಸಲು 5.15 ರಿಂದ 5.20 ನಿಮಿಷಗಳ ಮಾನದಂಡವನ್ನು ನಿಗದಿಪಡಿಸಿದೆ. ಈ ಹಿಂದೆ ಬಿಸಿಸಿಐ ನಡೆಸುತ್ತಿದ್ದ ಫಿಟ್ನೆಸ್ ಪರೀಕ್ಷೆಗಳು ಈಗಿರುವುದಕ್ಕಿಂತ ಹೆಚ್ಚು ಕಠಿಣವಾಗಿದ್ದವು. ಆಟಗಾರರು ತಮ್ಮ ಫಿಟ್ನೆಸ್ ಸಾಬೀತುಪಡಿಸಲು 2 ಕಿ.ಮೀ ಓಟವನ್ನು 9-10 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಇದರ ಜೊತೆಗೆ ಪ್ರಸಿದ್ಧ ‘ಯೋ-ಯೋ ಟೆಸ್ಟ್’ (Yo-Yo Test) ಅನ್ನು ಪಾಸ್ ಮಾಡುವುದು ಕಡ್ಡಾಯವಾಗಿತ್ತು. ಆದರೆ ಪ್ರಸ್ತುತ ಚಾಲ್ತಿಯಲ್ಲಿರುವ ಬ್ರಾಂಕೋ ಟೆಸ್ಟ್ ಆಟಗಾರರಿಗೆ ಹೆಚ್ಚು ವಿನಾಯಿತಿಗಳನ್ನು ನೀಡುತ್ತಿದ್ದು, ಇದರ ಪರಿಣಾಮಕಾರಿತ್ವದ ಬಗ್ಗೆಯೇ ಅನುಮಾನಗಳು ಮೂಡಿವೆ. ಇತ್ತೀಚೆಗೆ ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡಿರುವುದು ಬಿಸಿಸಿಐಗೆ ಎಚ್ಚರಿಕೆಯ ಗಂಟೆಯಾಗಿದೆ.
ಹಿರಿಯ ಆಟಗಾರರಿಗೆ ಇನ್ನು ಮುಂದೆ ವಿಶೇಷ ವಿನಾಯಿತಿ ಇಲ್ಲ
ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿರುವ ಬಿಸಿಸಿಐ ಮೂಲಗಳ ಪ್ರಕಾರ, ಭಾರತೀಯ ಆಟಗಾರರು ಬ್ರಾಂಕೋ ಟೆಸ್ಟ್ಗೆ ಇನ್ನೂ ಹೊಂದಿಕೊಂಡಿಲ್ಲ. ಈ ಹಿಂದೆ, ಮಂಡಳಿಯು ಬೇರೆ ಬೇರೆ ಆಟಗಾರರಿಗೆ ವಿಭಿನ್ನ ಫಿಟ್ನೆಸ್ ಮಾನದಂಡಗಳನ್ನು ಹೊಂದಿಸಿತ್ತು. ವಿಶೇಷವಾಗಿ ಕೆಲವು ಹಿರಿಯ ಆಟಗಾರರಿಗೆ ಫಿಟ್ನೆಸ್ ಪರೀಕ್ಷೆಯನ್ನು ಪಾಸ್ ಮಾಡಲು ಅತ್ಯಂತ ಸುಲಭವಾದ ಗುರಿಗಳನ್ನು ನೀಡಲಾಗುತ್ತಿತ್ತು ಎಂಬ ಅಂಶ ಇದೀಗ ಬಹಿರಂಗವಾಗಿದೆ. ಆದರೆ ಈಗ ಈ ವ್ಯವಸ್ಥೆಯನ್ನು ಕೈಬಿಡಲಾಗಿದ್ದು, ಎಲ್ಲರಿಗೂ ಒಂದೇ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಜೊತೆಗೆ, ತಂಡದ ಆಡಳಿತ ಮಂಡಳಿಯ ಅಗತ್ಯಗಳಿಗೆ ತಕ್ಕಂತೆ ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿಯಂತಹ ಆಟಗಾರರನ್ನು ಸೆಂಟರ್ ಆಫ್ ಎಕ್ಸಲೆನ್ಸ್ (CoE) ಸಿಬ್ಬಂದಿ ಪೂರ್ಣ ಪ್ರಮಾಣದ ಫಿಟ್ನೆಸ್ ಇಲ್ಲದಿದ್ದರೂ ಪಾಸ್ ಮಾಡುತ್ತಿದ್ದರು ಎಂಬ ಆರೋಪಗಳೂ ಕೇಳಿಬಂದಿವೆ.
ಟೀಮ್ ಇಂಡಿಯಾ ಫಿಸಿಯೋ ಕಮಲೇಶ್ ಜೈನ್ ಬೆವರಿಳಿಸಿದ ಮಂಡಳಿ
ಪದೇ ಪದೇ ಆಟಗಾರರು ಗಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಮತ್ತು ತಂಡದ ಆಡಳಿತ ಮಂಡಳಿಯು ಟೀಮ್ ಇಂಡಿಯಾ ಫಿಸಿಯೋ ಕಮಲೇಶ್ ಜೈನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇಂಗ್ಲೆಂಡ್ನಂತಹ ಕ್ರಿಕೆಟ್ಗೆ ಅತ್ಯಂತ ಅನುಕೂಲಕರ ಹವಾಮಾನ ಇರುವ ಕಡೆಗಳಲ್ಲಿಯೂ ಭಾರತೀಯ ಆಟಗಾರರು ಸ್ನಾಯು ಸೆಳೆತಕ್ಕೆ ಒಳಗಾಗುತ್ತಿರುವುದು ಮಂಡಳಿಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. “ಯಾವುದೇ ಆಟಗಾರನ ಸ್ಥಾನಮಾನವನ್ನು ನೋಡಿ ಫಿಟ್ನೆಸ್ ಬಗ್ಗೆ ರಾಜಿ ಮಾಡಿಕೊಳ್ಳಬಾರದು. ಆಟಗಾರರ ಫಿಟ್ನೆಸ್ ಬಗ್ಗೆ ಅಸಮಾಧಾನವಿದ್ದರೆ ತಕ್ಷಣವೇ ವರದಿ ಮಾಡಬೇಕು” ಎಂದು ಫಿಸಿಯೋಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮೈದಾನದಲ್ಲಿ ಕೆಲವು ಆಟಗಾರರ ಚಲನವಲನ ನಿಧಾನವಾಗಿರುವುದು, ಹಿರಿಯ ಬ್ಯಾಟರ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿದ್ದಾಗ ವಿಕೆಟ್ಗಳ ನಡುವೆ ಓಡಲು ಪರದಾಡುತ್ತಿರುವುದು ಮತ್ತು ಮೈದಾನದಲ್ಲಿ ನಿಧಾನಗತಿಯ ಫೀಲ್ಡರ್ಗಳ ಸಂಖ್ಯೆ ಹೆಚ್ಚಾಗಿರುವುದು ಮಂಡಳಿಯ ಗಮನಕ್ಕೆ ಬಂದಿದೆ. ಈ ಸಮಸ್ಯೆಗಳನ್ನು ಬಗೆಹರಿಸಲು ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ವಿಶೇಷ ಗಮನ ಹರಿಸಲು ಬಿಸಿಸಿಐ ನಿರ್ಧರಿಸಿದೆ. ತಂಡದ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಆಗಿ ಸೋಹಮ್ ದೇಸಾಯಿ ಅವರ ಬದಲಿಗೆ ಬಂದಿರುವ ಆಡ್ರಿಯನ್ ಲೆರೌಕ್ಸ್ ಅವರೇ ಯೋ-ಯೋ ಟೆಸ್ಟ್ ಬದಲಿಗೆ ಬ್ರಾಂಕೋ ಟೆಸ್ಟ್ ಅನ್ನು ಪರಿಚಯಿಸಿದ್ದರು. ಆದರೆ ಅವರು ಬಿಸಿಸಿಐನ ವೈದ್ಯಕೀಯ ತಂಡದೊಂದಿಗೆ ಉತ್ತಮ ಸಮನ್ವಯತೆ ಹೊಂದಿಲ್ಲ ಎಂಬ ವರದಿಗಳು ಸಹ ಹೊರಬಿದ್ದಿದ್ದು, ಒಟ್ಟಾರೆಯಾಗಿ ಭಾರತೀಯ ಕ್ರಿಕೆಟ್ ತಂಡದ ಫಿಟ್ನೆಸ್ ವಿಭಾಗದಲ್ಲಿ ಭಾರೀ ಬದಲಾವಣೆಯ ಗಾಳಿ ಬೀಸುತ್ತಿದೆ.
ಇದನ್ನೂ ಓದಿ : ಕಡೆಗಣಿಸಿದರೂ ಕುಗ್ಗದ ಛಲ : 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿ ವೇಗಿ ಮೊಹಮ್ಮದ್ ಶಮಿ



















