ಬೆಂಗಳೂರು : ವಿವೋ ಕಂಪನಿಯ ಮುಂಬರುವ ಹೊಸ ಸ್ಮಾರ್ಟ್‌ಫೋನ್ ‘ವಿವೋ V80 ಲೈಟ್ 5G‘ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸ್ಮಾರ್ಟ್‌ಫೋನ್ ಇದೀಗ ಗೂಗಲ್ ಪ್ಲೇ ಸಪೋರ್ಟೆಡ್ ಡಿವೈಸ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ದಟ್ಟವಾಗಿದೆ. ಬಿಡುಗಡೆಗೂ ಮುನ್ನವೇ ಈ ಮೊಬೈಲ್‌ನ ಹಲವು ನಿರೀಕ್ಷಿತ ಫೀಚರ್ಸ್‌ಗಳು ಹಾಗೂ ವಿಶೇಷತೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಗ್ರಾಹಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಗ್ಯಾಜೆಟ್ಸ್ 360 ಮತ್ತು ಇತರ ಟೆಕ್ ವರದಿಗಳ ಪ್ರಕಾರ, ವಿವೋ V80 ಲೈಟ್ 5G ಸ್ಮಾರ್ಟ್‌ಫೋನ್ ಗೂಗಲ್ ಪ್ಲೇ ಡೇಟಾಬೇಸ್‌ನಲ್ಲಿ V2576, V2643 ಮತ್ತು V2644 ಎಂಬ 3 ಮಾಡೆಲ್ ನಂಬರ್‌ಗಳೊಂದಿಗೆ ಪತ್ತೆಯಾಗಿದೆ. ಆಸಕ್ತಿದಾಯಕ ವಿಚಾರವೆಂದರೆ, ಇದರಲ್ಲಿ V2576 ಮಾಡೆಲ್ ನಂಬರ್ ಅನ್ನು ಮುಂಬರುವ ‘ವಿವೋ S2’ ಸ್ಮಾರ್ಟ್‌ಫೋನ್‌ಗೂ ಸಹ ನೀಡಲಾಗಿದೆ. ಹೀಗಾಗಿ, ವಿವೋ S2 ಮಾದರಿಯನ್ನೇ ಜಾಗತಿಕ ಮಾರುಕಟ್ಟೆಗಳಲ್ಲಿ ವಿವೋ V80 ಲೈಟ್ 5G ಹೆಸರಿನಲ್ಲಿ ಮರುನಾಮಕರಣ ಮಾಡಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಟೆಕ್ ತಜ್ಞರು ವಿಶ್ಲೇಷಿಸಿದ್ದಾರೆ.
ಬೃಹತ್ ಬ್ಯಾಟರಿ ಹಾಗೂ ಆಕರ್ಷಕ ಡಿಸ್‌ಪ್ಲೇ
ಈ ಸ್ಮಾರ್ಟ್‌ಫೋನ್ ವಿನ್ಯಾಸ ಮತ್ತು ಕಾರ್ಯಕ್ಷಮತೆಯ ಬಗ್ಗೆಯೂ ಹಲವು ಮಾಹಿತಿಗಳು ಹೊರಬಿದ್ದಿವೆ. ವಿವೋ V80 ಲೈಟ್ 5G ಸ್ಮಾರ್ಟ್‌ಫೋನ್ 6.83 ಇಂಚಿನ ಅಮೋಲೆಡ್ (AMOLED) ಡಿಸ್‌ಪ್ಲೇ ಹೊಂದಿರಲಿದ್ದು, 1.5K ರೆಸಲ್ಯೂಶನ್ ಹಾಗೂ 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ ಎನ್ನಲಾಗಿದೆ. ಗ್ರಾಹಕರಿಗೆ ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್ ಒದಗಿಸುವ ನಿಟ್ಟಿನಲ್ಲಿ ಈ ಫೋನ್‌ನಲ್ಲಿ 7050 mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಅಳವಡಿಸಲಾಗುತ್ತಿದೆ. ಇದು ಈ ಸೆಗ್ಮೆಂಟ್‌ನ ಅತ್ಯಂತ ದೊಡ್ಡ ಬ್ಯಾಟರಿ ಫೋನ್‌ಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಶಕ್ತಿಶಾಲಿ ಪ್ರೊಸೆಸರ್ ಮತ್ತು ಕ್ಯಾಮೆರಾ ವಿನ್ಯಾಸ
ವಿವೋ V80 ಲೈಟ್ 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7360-ಟರ್ಬೊ ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದು ನೂತನ ಆಂಡ್ರಾಯ್ಡ್ 16 ಆಧಾರಿತ ಆರಿಜಿನ್ ಒಎಸ್ 6 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸಲಿದೆ. ಕ್ಯಾಮೆರಾ ವಿಚಾರಕ್ಕೆ ಬಂದರೆ, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೋನಿ IMX852 ಪ್ರೈಮರಿ ಸೆನ್ಸಾರ್ ಕ್ಯಾಮೆರಾ ಇರಲಿದ್ದು, ಜೊತೆಗೆ ವಿವೋದ ಜನಪ್ರಿಯ ‘ಆರಾ ಲೈಟ್’ ಎಲ್‌ಇಡಿ ಫ್ಲ್ಯಾಷ್ ಇರಲಿದೆ.
ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸುವ ಸಾಧ್ಯತೆಯಿದೆ. ಸದ್ಯಕ್ಕೆ ವಿವೋ ಸಂಸ್ಥೆಯು ಈ ಸ್ಮಾರ್ಟ್‌ಫೋನ್‌ನ ಅಧಿಕೃತ ಬಿಡುಗಡೆ ದಿನಾಂಕ ಅಥವಾ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಬಿಟ್ಟುಕೊಟ್ಟಿಲ್ಲ. ಆದರೆ ಸತತವಾಗಿ ವಿವಿಧ ಸರ್ಟಿಫಿಕೇಶನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಈ ಸ್ಮಾರ್ಟ್‌ಫೋನ್ ಗ್ರಾಹಕರ ಕೈಸೇರುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ : ಲೋಕಾರ್ಪಣೆಗೊಂಡ ಕೆಲವೇ ವಾರದಲ್ಲಿ ಕುಸಿದ ಉ.ಪ್ರದೇಶದ 4,200 ಕೋಟಿ ರೂ. ವೆಚ್ಚದ ಎಕ್ಸ್‌ಪ್ರೆಸ್‌ವೇ



















