ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ತೆರೆಮರೆಯ ಅತೃಪ್ತಿ ಈಗ ಬೀದಿಗೆ ಬಂದಿದೆ. ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಬಂಡಾಯದ ಬಿಸಿ ನೇರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್ ನಾಯಕರಿಗೆ ತಟ್ಟಿದೆ. ಈಗಾಗಲೇ ಇಬ್ಬರು ಪ್ರಮುಖ ಶಾಸಕರು ತಮ್ಮ ರಾಜೀನಾಮೆ ಘೋಷಿಸಿದ್ದು, ಮತ್ತಷ್ಟು ಶಾಸಕರು ಅಸಮಾಧಾನದ ಹಾದಿ ಹಿಡಿದಿರುವುದು ಕೈ ನಾಯಕರಲ್ಲಿ ಭಾರಿ ಆತಂಕ ಮೂಡಿಸಿದೆ.
ಸಿಎಂ ಡಿ.ಕೆ. ಶಿವಕುಮಾರ್ ಮೇಲ ಹೆಚ್ಚಿದ ಒತ್ತಡ :
ಸಂಪುಟ ಪುನಾರಚನೆಯ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಸ್ವಪಕ್ಷದ ಶಾಸಕರನ್ನು ಸಮಾಧಾನಪಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಚಿವ ಸ್ಥಾನ ಸಿಗದೇ ವಂಚಿತರಾದ ಶಾಸಕರು ನೇರವಾಗಿ ಡಿ.ಕೆ. ಶಿವಕುಮಾರ್ ಅವರ ರಾಜತಾಂತ್ರಿಕ ನಡೆ ಮತ್ತು ಹೈಕಮಾಂಡ್‌ನ ಏಕಪಕ್ಷೀಯ ತೀರ್ಮಾನಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. “ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ನಾಯಕರು ವಿಫಲರಾಗಿದ್ದಾರೆ” ಎಂದು ಅತೃಪ್ತ ಶಾಸಕರ ಗುಂಪು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಇಬ್ಬರು ಶಾಸಕರ ರಾಜೀನಾಮೆ ; ಇತರರಿಂದಲೂ ಬಂಡಾಯದ ಮುನ್ಸೂಚನೆ :
ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿ ಹೈಕಮಾಂಡ್‌ಗೆ ಶಾಕ್ ನೀಡಿದ್ದಾರೆ.
“ಪಕ್ಷದಲ್ಲಿ ಕೇವಲ ಪ್ರಭಾವಿ ನಾಯಕರ ಮಕ್ಕಳಿಗೆ ಮಾತ್ರ ಮಣೆ ಹಾಕಲಾಗುತ್ತಿದೆ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಕೇವಲ ಇವರಿಬ್ಬರು ಮಾತ್ರವಲ್ಲದೆ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕರಾವಳಿ ಭಾಗದ ಇನ್ನೂ ಹಲವು ಹಿರಿಯ ಶಾಸಕರು ದಿಢೀರ್ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ತಮಗೆ ಸೂಕ್ತ ಪ್ರಾತಿನಿಧ್ಯ ಸಿಗದಿದ್ದರೆ ಮುಂದಿನ ಹೆಜ್ಜೆ ಇಡುವುದಾಗಿ ಹೈಕಮಾಂಡ್‌ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಇದು ಸಂಘಟಿತ ಬಂಡಾಯವಾಗಿ ಮಾರ್ಪಡುವ ಲಕ್ಷಣಗಳು ಕಾಣಿಸುತ್ತಿವೆ.
‘ಡ್ಯಾಮೇಜ್ ಕಂಟ್ರೋಲ್’ಗೆ ಕೈ ನಾಯಕರ ಕಸರತ್ತು:
ರಾಜೀನಾಮೆ ಪರ್ವ ಮತ್ತು ಶಾಸಕರ ಬಹಿರಂಗ ಅಸಮಾಧಾನದಿಂದ ಕಂಗೆಟ್ಟಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಕ್ಷಣವೇ ಪರಿಸ್ಥಿತಿ ಹತೋಟಿಗೆ ತರಲು ಕಾರ್ಯಾಚರಣೆಗೆ ಇಳಿದಿದ್ದಾರೆ. ಅತೃಪ್ತ ಶಾಸಕರನ್ನು ವೈಯಕ್ತಿಕವಾಗಿ ಸಂಪರ್ಕಿಸುತ್ತಿರುವ ಅವರು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಅಥವಾ ಮುಂಬರುವ ದಿನಗಳಲ್ಲಿ ಸೂಕ್ತ ಅವಕಾಶ ನೀಡುವ ಭರವಸೆ ನೀಡಿ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ.
ಆದರೆ, ಶಾಸಕರು ಮಾತ್ರ ಈ ಬಾರಿ ಯಾವುದೇ ರಾಜಿ ಸೂತ್ರಕ್ಕೆ ಒಪ್ಪುವಂತೆ ಕಾಣುತ್ತಿಲ್ಲ. ಈ ಆಂತರಿಕ ಕಚ್ಚಾಟ ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ಸ್ಥಿರತೆಯ ಮೇಲೆಯೇ ಪರಿಣಾಮ ಬೀರಲಿದೆಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡಿವೆ.
ಇದನ್ನೂ ಓದಿ : ಸಚಿವ ಸ್ಥಾನ ಮಿಸ್ ; ನಾಳೆಯೇ ರಾಜೀನಾಮೆ ಕೊಡ್ತೇನೆ ಎಂದ ಶಾಸಕ ಬೇಳೂರು ಗೋಪಾಲಕೃಷ್ಣ!



















