ಬೆಂಗಳೂರು : ಡಿಜಿಟಲ್ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರವು ಇತ್ತೀಚೆಗೆ ಎಂ-ಆಧಾರ್ ಆ್ಯಪ್ ಬದಲು ಹೊಸ “ಆಧಾರ್ ಆ್ಯಪ್” ಬಿಡುಗಡೆ (Aadhaar App) ಮಾಡಿದೆ. ಹೊಸ ಆಧಾರ್ ಆ್ಯಪ್ ಗೆ ಭಾರಿ ಬೇಡಿಕೆ ಉಂಟಾಗಿದ್ದು, ಇದು ಸುಮಾರು 4 ಕೋಟಿಗೂ ಅಧಿಕ ಡೌನ್ ಲೋಡ್ ಗಳನ್ನು ಕಂಡಿದೆ. ಹಾಗಾಗಿ, ಇದುವರೆಗೆ ಡೌನ್ ಲೋಡ್ ಮಾಡದವರು ಕೂಡ ಆಧಾರ್ ಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಪಡೆಯಲು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಹೊಸ ಆಧಾರ್ ಆ್ಯಪ್ ಅನ್ನು ಬಳಸುವ ಮೂಲಕ ಬಳಕೆದಾರರು ಆಧಾರ್ ಕೇಂದ್ರಕ್ಕೆ ಹೋಗದೆ, ತಮ್ಮ ಮೊಬೈಲ್ ನಲ್ಲೇ ಅನೇಕ ಸೇವೆಗಳನ್ನು ಪಡೆಯಬಹುದಾಗಿದೆ. ಹೊಸ ಆ್ಯಪ್ ಗೆ ಚಾಲನೆ ನೀಡಿದ ಬಳಿಕ 41 ಲಕ್ಷ ಹೊಸ ಮೊಬೈಲ್ ನಂಬರ್ ಗಳು, 11 ಲಕ್ಷಕ್ಕೂ ಅಧಿಕ ವಿಳಾಸಗಳು, 12.5 ಲಕ್ಷಕ್ಕೂ ಅಧಿಕ ಇ-ಮೇಲ್ ವಿಳಾಸಗಳನ್ನು ಅಪ್ಡೇಟ್ ಮಾಡಲಾಗಿದೆ. ಹಾಗಾದರೆ, ಹೊಸ ಆಧಾರ್ ಆ್ಯಪ್ ನಲ್ಲಿ ಯಾವೆಲ್ಲ ಸೇವೆಗಳಿವೆ? ಇದನ್ನೇಕೆ ಡೌನ್ ಲೋಡ್ ಮಾಡಿಕೊಳ್ಳಬೇಕು? ಇಲ್ಲಿದೆ ಮಾಹಿತಿ.
ಯಾವೆಲ್ಲ ಸೇವೆ ಲಭ್ಯ?
• ಆಧಾರ್ ಸೇವೆಗಳು: ನಿಮ್ಮ ಆಧಾರ್ ವಿವರಗಳನ್ನು ಪಡೆಯುವುದು, ಇ-ಆಧಾರ್ ಡೌನ್ ಲೋಡ್ ಮಾಡುವುದು ಮತ್ತು ಆಫ್ ಲೈನ್ ಇ-ಕೆವೈಸಿ (e-KYC) ಸೌಲಭ್ಯ.
• ಅಪ್ ಡೇಟ್ ಸೇವೆಗಳು: ಆಧಾರ್ ನಲ್ಲಿ ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು ಮತ್ತು ಇತರ ನವೀಕರಣಗಳಿಗೆ ಸಂಬಂಧಿಸಿದ ಮಾಹಿತಿ.
• ಆಧಾರ್ ಸೇವಾ ಕೇಂದ್ರ: ಹತ್ತಿರದ ಆಧಾರ್ ಸೇವಾ ಕೇಂದ್ರಗಳನ್ನು ಹುಡುಕುವ ಸೌಲಭ್ಯ.
• ಬಯೋಮೆಟ್ರಿಕ್ ದೃಢೀಕರಣ: ಭದ್ರತೆಗಾಗಿ ಬಯೋಮೆಟ್ರಿಕ್ ಲಾಕ್/ಅನ್ ಲಾಕ್ ಮಾಡುವ ಆಯ್ಕೆಗಳು.
• QR ಕೋಡ್ ಮತ್ತು ವರ್ಚುವಲ್ ಐಡಿ: ಸುರಕ್ಷಿತ ದೃಢೀಕರಣಕ್ಕಾಗಿ QR ಕೋಡ್ ಸ್ಕ್ಯಾನಿಂಗ್ ಮತ್ತು ವರ್ಚುವಲ್ ಐಡಿ (VID) ಬಳಕೆ.
ಇದನ್ನೂ ಓದಿ : ಐಷಾರಾಮಿ ಕಾರುಗಳಿಗೆ E20 ಪೆಟ್ರೋಲ್ ಕಂಟಕ? ಬೆಂಜ್, BMW ವಾಹನಗಳನ್ನೇ ಹಾಳು ಮಾಡ್ತಿದೆ ಎಥೆನಾಲ್ ಇಂಧನ!



















