ಬೆಂಗಳೂರು : ಯಾವುದೋ ಕಂಪನಿಯ ಷೇರುಗಳನ್ನು ಖರೀದಿ ಮಾಡಿರುತ್ತೇವೆ. ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡ ಕಾರಣ ಒಂದು ವರ್ಷದಲ್ಲಿ ಶೇ.20-30ರಿಂದ ರಿಟರ್ನ್ಸ್ ಲಭಿಸಿರುತ್ತದೆ. ಮ್ಯೂಚುವಲ್ ಫಂಡ್ ಹೂಡಿಕೆಯಲ್ಲೂ ಒಳ್ಳೆಯ ರಿಟರ್ನ್ಸ್ ಲಭಿಸಿರುತ್ತದೆ. ಯಾವುದೋ ಕಾರಣಕ್ಕೆ ಹೂಡಿಕೆಯ ಹಣ ಹಿಂಪಡೆಯಬೇಕು ಎಂದರೆ ದೀರ್ಘಾವಧಿ ಬಂಡವಾಳ ಲಾಭ ತೆರಿಗೆಯೇ (LTCG) ಶೇ.12.5ರಷ್ಟು ಕಟ್ಟಬೇಕಾಗುತ್ತದೆ. ಆಗ, ಹೂಡಿಕೆಯಲ್ಲಿ ಒಂದಷ್ಟು ಭಾಗ ತೆರಿಗೆ ರೂಪದಲ್ಲೇ ಕಡಿತವಾಯಿತಲ್ಲ ಎಂಬ ಬೇಸರ ಸಹಜವಾಗಿಯೇ ಮೂಡುತ್ತದೆ. ಇದರ ಮಧ್ಯೆಯೇ, ಕೇಂದ್ರ ಸರ್ಕಾರವು ಎಲ್ ಟಿಸಿಜಿಯನ್ನೇ ರದ್ದುಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದಾಗ್ಯೂ, ಷೇರುಗಳ ಖರೀದಿ ಮೇಲಿನ ಲಾಭಕ್ಕೆ ವಿಧಿಸುವ ಎಲ್ ಟಿಸಿಜಿಯನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ತೆರಿಗೆ ರದ್ದು ಕುರಿತಂತೆ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಮಾರುಕಟ್ಟೆಯ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಅಥವಾ ದೇಶೀಯ ಮತ್ತು ವಿದೇಶಿ ಹೂಡಿಕೆದಾರರ ನಡುವೆ ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ LTCG ತೆರಿಗೆಯನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.
ಯಾವುದಾದರೂ ಷೇರುಗಳನ್ನು ಖರೀದಿಸಿ, ಒಂದು ವರ್ಷದ ನಂತರ ಅವುಗಳನ್ನು ಮಾರಾಟ ಮಾಡಿದರೆ ಶೇ.12.5ರಷ್ಟು ದೀರ್ಘಾವಧಿ ಬಂಡವಾಳ ಲಾಭ ತೆರಿಗೆಯನ್ನು ಕೇಂದ್ರ ಸರ್ಕಾರ ವಿಧಿಸುತ್ತದೆ. ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ ಗಳಿಸಿದ ಲಾಭಕ್ಕೂ ಶೇ.12.5ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಇದೇ ಕಾರಣಕ್ಕಾಗಿಯೇ, ಹೂಡಿಕೆದಾರರು ಎಲ್ ಟಿಸಿಜಿ ಹಾಗೂ ಎಸ್ ಟಿಸಿಜಿ ತೆರಿಗೆ ಪದ್ಧತಿಗಳನ್ನು ರದ್ದುಗೊಳಿಸಬೇಕು ಎಂದು ಆಗಾಗ ಆಗ್ರಹಿಸುತ್ತಲೇ ಇರುತ್ತಾರೆ. ಅದರಲ್ಲೂ, ಇತ್ತೀಚೆಗೆ ವಿದೇಶಿ ಹೂಡಿಕೆ ಮೇಲಿನ ತೆರಿಗೆಗೆ ವಿನಾಯಿತಿ ನೀಡಲಾಗಿತ್ತು. ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಇಂತಹ ಕ್ರಮ ತೆಗೆದುಕೊಳ್ಳಲಾಗಿತ್ತು. ಹಾಗಾಗಿ, ದೇಶೀಯ ಹೂಡಿಕೆದಾರರಿಗೂ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಇದನ್ನು ಸರ್ಕಾರ ನಿರಾಕರಿಸಿದೆ.
ಇದನ್ನೂ ಓದಿ : ರಾಜ್ಯ ಖನಿಜಗಳ ನಿಗಮದಲ್ಲಿ 50 ಎಂಜಿನಿಯರ್‌ಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ



















