ಬೆಂಗಳೂರು : ಜೆ.ಪಿ. ನಗರದ ಪಬ್‌ವೊಂದರಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಒಬ್ಬರು ಕುಡಿದ ಮತ್ತಲ್ಲಿ ರಾದ್ಧಾಂತ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೂ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಜೆ.ಪಿ ನಗರದ ಪಂಪ್ ಹೌಸ್ ಪಬ್‌ಗೆ ತೆರಳಿದ್ದ ಅಬಕಾರಿ ಇನ್ಸ್‌ಪೆಕ್ಟರ್ ಮಲ್ಲಪ್ಪ ಎಸ್. ಕುಂದಗೋಳ ಅವರು, ಕಂಠಪೂರ್ತಿ ಮದ್ಯ ಸೇವಿಸಿ, ಪಬ್‌ನಲ್ಲಿದ್ದವರಿಗೆ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

ಸರ್ಕಾರಿ ಗುರುತಿನ ಚೀಟಿ (ಐಡಿ ಕಾರ್ಡ್) ಧರಿಸಿಕೊಂಡೇ ಪಬ್‌ಗೆ ಪ್ರವೇಶಿಸಿ ಮದ್ಯ ಸೇವಿಸಿದ ಇನ್ಸ್‌ಪೆಕ್ಟರ್ ಮಲ್ಲಪ್ಪ, ಪಬ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗಳ ಜೊತೆಗೂ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಪ್ರಶ್ನಿಸಿದ ಪಬ್ ಮ್ಯಾನೇಜರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಮೊನ್ನೆ ರಾತ್ರಿ ಬೆಂಗಳೂರಿನ ಜೆ.ಪಿ ನಗರದ ಪಂಪ್ ಹೌಸ್ ಪಬ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಅಬಕಾರಿ ಇಲಾಖೆಯ ಸಬ್ ಡಿವಿಷನ್ 11ರಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್ ಮಲ್ಲಪ್ಪ ಎಸ್. ಕುಂದಗೋಳ ಅವರು ರಾದ್ಧಾಂತ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಬೆಂಗಳೂರು ನಿವಾಸಿಗಳೇ ಗಮನಿಸಿ.. ನಾಳೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ!



















