ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಸುಮಾರು 7 ಕೋಟಿಗೂ ಅಧಿಕ ಖಾಸಗಿ ಕಂಪನಿಗಳ ನೌಕರರಿಗೆ ನಿವೃತ್ತಿ ನಿಧಿ ಹಾಗೂ ಪಿಂಚಣಿ ಖಾತರಿ ನೀಡುವ ಪ್ರಮುಖ ಸಂಸ್ಥೆಯಾಗಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಇಪಿಎಸ್ ಯೋಜನೆ ಅಡಿಯಲ್ಲಿ ನಿವೃತ್ತಿ ನಂತರ ಪಿಂಚಣಿ ಪಡೆಯಲಿದ್ದಾರೆ. ಇಪಿಎಫ್ಒ ಸದಸ್ಯರಾದವರಿಗೆ ಮಾತ್ರ ಇದು ಲಭ್ಯವಿರುತ್ತದೆ.
ಇನ್ನು, ಇಪಿಎಫ್ಒ ಸದಸ್ಯರಾದವರು ಕನಿಷ್ಠ 10 ವರ್ಷ ಯಾವುದೇ ಕಂಪನಿಯಲ್ಲಿ ಕೆಲಸ ಮಾಡಿದ್ದರೆ ಅವರು ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ. ಸೇವೆಯು ಸತತವಾಗಿ ಇರದಿದ್ದರೂ ಪರವಾಗಿಲ್ಲ, ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು ಎಂಬ ನಿಯಮವಿದೆ. ಅದರಂತೆ, 10 ವರ್ಷ ಸೇವೆ ಸಲ್ಲಿಸಿ, ಉದ್ಯೋಗ ತೊರೆದರೂ, ಉದ್ಯೋಗಿಗೆ 58 ವರ್ಷ ತುಂಬಿದ ಬಳಿಕ ಮಾಸಿಕ 1 ಸಾವಿರ ರೂಪಾಯಿ ಲಭಿಸುತ್ತದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.
ಪ್ರಸ್ತುತ ಪಿಂಚಣಿ ಲೆಕ್ಕಾಚಾರಕ್ಕೆ ಗರಿಷ್ಠ ವೇತನ ಮಿತಿಯನ್ನು 15,000 ರೂಪಾಯಿ ಎಂದು ಪರಿಗಣಿಸಲಾಗುತ್ತದೆ. ಅದರಂತೆ, 10 ವರ್ಷಗಳ ಕಾಲ ಪಿಎಫ್ ಜತೆಗೆ ಪಿಂಚಣಿ ಮೊತ್ತವೂ ಕಡಿತವಾಗುತ್ತದೆ. ಪಿಂಚಣಿ ಮೊತ್ತವನ್ನು ಮಾಸಿಕವಾಗಿ ನೀಡಲು ಲೆಕ್ಕಾಚಾರ ಹಾಕಿ ಮೊತ್ತವನ್ನು ನಿಗದಿಪಡಿಸಲಾಗುತ್ತದೆ. ಇದರ ಪ್ರಕಾರ, 10 ವರ್ಷ ಸೇವೆ ಸ್ಲಲಿಸಿದವರಿಗೆ 58ನೇ ವರ್ಷದ ಬಳಿಕ ತಿಂಗಳಿಗೆ 1 ಸಾವಿರ ರೂಪಾಯಿ ಪಿಂಚಣಿ ಲಭಿಸಲಿದೆ.
ಒಂದು ವೇಳೆ ಉದ್ಯೋಗಿಯು 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸದಿದ್ದರೆ, ಅವರು ನಿವೃತ್ತಿಯ ನಂತರ ಮಾಸಿಕ ಪಿಂಚಣಿಗೆ ಅರ್ಹರಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರು ಫಾರ್ಮ್ 10ಸಿ ಬಳಸಿ ತಮ್ಮ ಇಪಿಎಸ್ ಕಾರ್ಪಸ್ ಅನ್ನು ಹಿಂಪಡೆಯಬಹುದು. 10 ವರ್ಷಗಳಿಗಿಂತ ಮೊದಲೇ ಉದ್ಯೋಗ ತೊರೆದವರು ಪಿಎಫ್ ಹಾಗೂ ಪಿಂಚಣಿಯ ಎಲ್ಲ ಮೊತ್ತವನ್ನು ವಿತ್ ಡ್ರಾ ಮಾಡಬಹುದಾಗಿದೆ.
ಇದನ್ನೂ ಓದಿ : 8ನೇ ವೇತನ ಆಯೋಗ : ಮತ್ತೊಂದು ಡೆಡ್ ಲೈನ್ ವಿಸ್ತರಣೆ ಮಾಡಿದ ಆಯೋಗ



















