ಮಂಡ್ಯ : ಜಿಲ್ಲೆಯಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಬೀಳುತ್ತಿಲ್ಲ. ದಿನದಿಂದ ದಿನಕ್ಕೆ ಹೆದ್ದಾರಿಯಲ್ಲಿ ಪುಂಡರ ದರ್ಪ ಹೆಚ್ಚಾಗುತ್ತಿದ್ದು, ವಾರದ ಅಂತರದಲ್ಲೇ ಮೂರನೇ ಘಟನೆ ಬೆಳಕಿಗೆ ಬಂದಿದೆ. ಮೆಡಿಸನ್ ಟ್ರಕ್, ಕಾರಿನ ಬಳಿಕ ಇದೀಗ ಫ್ಲೈ ಬಸ್ ಸಿಬ್ಬಂದಿಯೇ ಪುಂಡರ ಹಲ್ಲೆಗೆ ಗುರಿಯಾಗಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ನಡೆದ ಈ ಘಟನೆ ಎರಡು ದಿನಗಳ ಬಳಿಕ ಇದೀಗ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರಿಗೆ ತೆರಳುತ್ತಿದ್ದ ಫ್ಲೈ ಬಸ್ ಮಂಡ್ಯದಲ್ಲಿ ಪ್ರಯಾಣಿಕರನ್ನು ಇಳಿಸಿ ಸರ್ವಿಸ್ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಮಧ್ಯರಾತ್ರಿ ಸುಮಾರು 2.30ಕ್ಕೆ ಕೆಲ ಪುಂಡರು ಬಸ್‌ನ್ನು ಅಡ್ಡಗಟ್ಟಿದ್ದಾರೆ.
ಕುಡಿದ ನಶೆಯಲ್ಲಿ ಒನ್‌ವೇ ಮಾರ್ಗದಲ್ಲಿ ಬಂದ ಆರೋಪಿಗಳು ಬಸ್ ಚಾಲಕ ವಿನೋದ್ ಮತ್ತು ನಿರ್ವಾಹಕ ಈರಣ್ಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡುವುದಾಗಿ ಹೇಳಿದಾಗ ಪೊಲೀಸರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. “ನಾನು ಮಂಡ್ಯ ಲೋಕಲ್” ಎಂದು ಬೆದರಿಕೆ ಹಾಕುತ್ತಾ ಹಲ್ಲೆ ನಡೆಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಇತ್ತೀಚೆಗೆ ಟ್ರಕ್ ಚಾಲಕನ ಮೇಲೆ ಫೈರಿಂಗ್ ನಡೆದಿದ್ದು, ಮದ್ದೂರು ಸಮೀಪ ಮತ್ತೊಂದು ಪ್ರಕರಣದಲ್ಲಿ ರಾಡ್‌ನಿಂದ ಹಲ್ಲೆ ನಡೆದಿತ್ತು. ಅದರ ಬೆನ್ನಲ್ಲೇ ಇದೀಗ ಫ್ಲೈ ಬಸ್ ಸಿಬ್ಬಂದಿಯ ಮೇಲಿನ ಹಲ್ಲೆ ಪ್ರಕರಣವೂ ಬೆಳಕಿಗೆ ಬಂದಿರುವುದು ಆತಂಕ ಹೆಚ್ಚಿಸಿದೆ. ಪ್ರಕರಣ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ‘ಜಂಗಲ್ ಕಟ್ಟಿಂಗ್’ ಹೆಸರಲ್ಲಿ ಮರಗಳ ಮಾರಣಹೋಮ? KEB ಅಧಿಕಾರಿಗಳ ವಿರುದ್ಧ ಜನಾಕ್ರೋಶ!


















