ಉಡುಪಿ : ಸ್ಯಾಂಡಲ್ವುಡ್ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ನಿನ್ನೆ 43ನೇ ವಸಂತಕ್ಕೆ ಕಾಲಿಟ್ಟಿದ್ದು, ಕುಟುಂಬ ಸದಸ್ಯರು, ಆತ್ಮೀಯರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಅವರಿಗೆ ಶುಭ ಕೋರಿದ್ದಾರೆ. ಈ ವಿಶೇಷ ದಿನದಂದು ಅವರ ತಂಡದಿಂದ ವಿಶೇಷ ವಿಡಿಯೋ ಹೊರಬಿದ್ದಿದೆ. ಈ ಕ್ಲಿಪ್ ನಟನ ಸಾಮಾಜಿಕ ಸೇವೆಯ ಒಂದು ಚಿತ್ರಣ ಒದಗಿಸಿದೆ.
ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ಸಮಾಜ ಸೇವೆಯಲ್ಲಿ ನಟ ಭಾಗಿಯಾಗಿರೋದು ನಮಗೆ ತಿಳಿದಿರುವ ವಿಚಾರ. ಇದರ ಮೂಲಕವೇ ವಿದ್ಯಾರ್ಥಿ ವೇತನ ಒದಗಿಸಿ ಅನೇಕ ಕುಟುಂಬಗಳ ಆರ್ಥಿಕ ಹೊರೆ ಕಡಿಮೆ ಮಾಡಿದ್ದಾರೆ. ಹಂಚಿಕೊಂಡ ವಿಡಿಯೋದಲ್ಲಿ ರಿಷಬ್ ಶೆಟ್ಟರ ಸಹಾಯವನ್ನು ನೆನೆದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಣ್ಣೀರು ಹಾಕುತ್ತಾ, ಭಾವುಕರಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ರಿಷಬ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ರಿಷಬ್ ಶೆಟ್ಟಿ ಫೌಂಡೇಶನ್‌ನಲ್ಲಿ, ‘ಸಾಧಿಸುವ ಛಲವಿರುವ ಪ್ರತಿಯೊಬ್ಬ ಮಗುವಿಗೂ ಕನಸು ಕಾಣಲು, ಕಲಿಯಲು ಮತ್ತು ಯಶಸ್ವಿಯಾಗಲು ಅವಕಾಶ ಸಿಗಬೇಕು ಎಂದು ನಾವು ಬಲವಾಗಿ ನಂಬುತ್ತೇವೆ. ನಮ್ಮ ಶೈಕ್ಷಣಿಕ ವಿದ್ಯಾರ್ಥಿವೇತನದ ಮೂಲಕ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ನಾವು ಹೆಮ್ಮೆಪಡುತ್ತೇವೆ. ಇದು ಅವರು ಧೈರ್ಯ ಮತ್ತು ಭರವಸೆಯೊಂದಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುತ್ತದೆ’ ಎಂದು ತಿಳಿಸಿದೆ.
‘ನಾವು ನೀಡುವ ಪ್ರತಿಯೊಂದು ವಿದ್ಯಾರ್ಥಿವೇತನವೂ ಕೇವಲ ಆರ್ಥಿಕ ಸಹಾಯವಾಗಿರದೆ, ಅದು ಒಂದು ಉಜ್ವಲ ಭವಿಷ್ಯ, ಬಲಿಷ್ಠ ಸಮುದಾಯ ಮತ್ತು ನಾಳಿನ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಮಾಡುತ್ತಿರುವ ಹೂಡಿಕೆಯಾಗಿದೆ’ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ : ಹೇಗಿದೆ ‘ಕರಾವಳಿ’ ಕಂಬಳ ಕನಸು?


















