ಜಕಾರ್ತ/ನವದೆಹಲಿ : ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ. ಜಕಾರ್ತದ ಇಸ್ತಾನಾ ಮೆರ್ಡೆಕಾ ಅಧ್ಯಕ್ಷೀಯ ಅರಮನೆಯಲ್ಲಿ ಪ್ರಧಾನಿ ಮೋದಿಯವರಿಗೆ ಅದ್ಧೂರಿ ಹಾಗೂ ಗೌರವಪೂರ್ವಕ ಅಧಿಕೃತ ಸ್ವಾಗತ ದೊರೆತಿದ್ದು, ಈ ಭೇಟಿಯ ಅವಧಿಯಲ್ಲಿ ರಕ್ಷಣೆ, ಆರ್ಥಿಕತೆ ಮತ್ತು ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದಂತೆ ಹಲವು ಐತಿಹಾಸಿಕ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭಾರತದ ಹೆಮ್ಮೆಯ ‘ಅಸ್ತ್ರ’ದ ಮೇಲೆ ಇಂಡೋನೇಷ್ಯಾ ಕಣ್ಣು
ಭಾರತದ ಸ್ವದೇಶಿ ತಂತ್ರಜ್ಞಾನದ ‘ಅಸ್ತ್ರ’ (Astra) ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ಇಂಡೋನೇಷ್ಯಾ ನಿರ್ಧರಿಸಿರುವುದು ಈ ದ್ವಿಪಕ್ಷೀಯ ಮಾತುಕತೆಯ ಅತ್ಯಂತ ಪ್ರಮುಖ ಫಲಿತಾಂಶ ಎಂದು ಹೇಳಲಾಗುತ್ತಿದೆ. ಪಾಕ್ ಉಗ್ರರ ವಿರುದ್ಧ ನಡೆದ ಇತ್ತೀಚೆಗಿನ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ರಕ್ಷಣಾ ಪಡೆಗಳು ಈ ಕ್ಷಿಪಣಿಯ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದವು. ಇದರ ಬೆನ್ನಲ್ಲೇ ಇಂಡೋನೇಷ್ಯಾ ಈ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಮುಂದಾಗಿದೆ. ಇದರ ಜೊತೆಗೆ, ಈಗಾಗಲೇ ಭಾರತದಿಂದ ‘ಬ್ರಹ್ಮೋಸ್’ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಪಡೆದುಕೊಂಡಿರುವ ಇಂಡೋನೇಷ್ಯಾ, ತನ್ನ ಕ್ಷಿಪಣಿ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಹೆಚ್ಚುವರಿ ಬ್ರಹ್ಮೋಸ್ ಬ್ಯಾಟರಿಗಳನ್ನು ಪೂರೈಸುವಂತೆ ಭಾರತಕ್ಕೆ ಕೋರಿದ್ದು, ಭಾರತ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ಸಾಧ್ಯತೆಯಿದೆ.
ಭಾರತೀಯ ಇವಿಎಂ ಮಾದರಿಗೆ ಜಾಗತಿಕ ಮನ್ನಣೆ
ಭಾರತದ ಚುನಾವಣಾ ನಿರ್ವಹಣಾ ವ್ಯವಸ್ಥೆಗೆ ಸಿಕ್ಕ ಅತಿ ದೊಡ್ಡ ಹೆಮ್ಮೆಯ ವಿಷಯವೆಂದರೆ, ಇಂಡೋನೇಷ್ಯಾ ದೇಶಕ್ಕೆ ಸರಿಹೊಂದುವಂತಹ ವಿಶೇಷ ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ಅಭಿವೃದ್ಧಿಗೆ ಭಾರತ ಬೆಂಬಲ ನೀಡಲಿದೆ. ಇದು ಭಾರತದ ಪ್ರಜಾಪ್ರಭುತ್ವದ ಸಾಂಸ್ಥಿಕ ಕಾರ್ಯವೈಖರಿಗೆ ಸಿಕ್ಕ ಜಾಗತಿಕ ಮನ್ನಣೆಯಾಗಿದ್ದು, ಎರಡು ದೇಶಗಳ ನಡುವಿನ ಸಾಂಸ್ಥಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸಲಿದೆ.
ಸಬಾಂಗ್ ಬಂದರು ಅಭಿವೃದ್ಧಿ
ರಕ್ಷಣಾ ಕ್ಷೇತ್ರ ಮಾತ್ರವಲ್ಲದೆ ಆರ್ಥಿಕವಾಗಿಯೂ ಈ ಪ್ರವಾಸ ಪ್ರಾಮುಖ್ಯತೆ ಪಡೆದಿದೆ. ಅಗತ್ಯ ಖನಿಜಗಳ ಪೂರೈಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇಂಡೋನೇಷ್ಯಾದಲ್ಲಿ ಉಕ್ಕು, ನಿಕಲ್ ಹಾಗೂ ಅಪರೂಪದ ಭೂಮಿಯ ಶಾಶ್ವತ ಕಾಂತಗಳ (rare earth permanent magnets) ಉತ್ಪಾದನಾ ವಲಯದಲ್ಲಿ ಭಾರತ ಹೂಡಿಕೆ ಮಾಡಲಿದೆ. ಮತ್ತೊಂದೆಡೆ, ಮಲಕ್ಕಾ ಜಲಸಂಧಿಗೆ ಮುಖಮಾಡಿ ನಿಂತಿರುವ ಇಂಡೋನೇಷ್ಯಾದ ಆಯಕಟ್ಟಿನ ‘ಸಬಾಂಗ್ ಬಂದರ’ನ್ನು ಉಭಯ ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ.
ಭಾರತದ ಗ್ರೇಟ್ ನಿಕೋಬಾರ್ ಬಂದರು ಯೋಜನೆಯಿಂದ ಕೇವಲ 100 ಮೈಲಿ ದೂರದಲ್ಲಿರುವ ಈ ಬಂದರಿನ ಅಭಿವೃದ್ಧಿಯು ಹಿಂದೂ ಮಹಾಸಾಗರ ವಲಯದಲ್ಲಿ ಜಂಟಿ ಕಡಲ ಭದ್ರತೆಗೆ ಪ್ರಮುಖ ಪಾತ್ರ ವಹಿಸಲಿದೆ. ಈ ಪ್ರವಾಸದ ಕುರಿತು ವಿದೇಶಾಂಗ ಸಚಿವಾಲಯವು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿಯವರ ಈ ಭೇಟಿಯು ಭಾರತ-ಇಂಡೋನೇಷ್ಯಾ ನಡುವಿನ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದಿದೆ.
ಇದನ್ನೂ ಓದಿ : ನಿಯಮ ಉಲ್ಲಂಘನೆ ಆರೋಪ : ಕಲಬುರಗಿ ನರ್ಸಿಂಗ್ ಕಾಲೇಜುಗಳ ವಿರುದ್ಧ ದಿನೇಶ್ ಕಲ್ಲಹಳ್ಳಿ ದೂರು!



















