ಕೊಡಗು : ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಮಾಹಿತಿ ಪ್ರಕಾರ, ಆಂಧ್ರಪ್ರದೇಶ ಮೂಲದ ಸಂತೋಷ್ ಕುಮಾರ್ ಮತ್ತು ಗಣೇಶ್ ನಾಯಕ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ವೀಕೆಂಡ್ ಹಿನ್ನೆಲೆ ಕೊಡಗು ಪ್ರವಾಸಕ್ಕೆ ಬಂದಿದ್ದರು. ಭೋರ್ಗರೆದು ಹರಿಯುತ್ತಿದ್ದ ಮಲ್ಲಳ್ಳಿ ಜಲಪಾತದ ಮಧ್ಯದಲ್ಲಿದ್ದ ಬಂಡೆಯೊಂದರ ಮೇಲೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಇಬ್ಬರೂ ಇಳಿದಿದ್ದರು.
ಬಂಡೆಯ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ, ಜಲಪಾತದ ಮೇಲ್ಭಾಗದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದಿಂದ ಏಕಾಏಕಿ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಯಿತು. ಪರಿಣಾಮ ಕಣ್ಮುಚ್ಚಿ ಕಣ್ಬಿಡುವಷ್ಟರಲ್ಲಿ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿದಿದೆ. ನೀರಿನ ರಭಸಕ್ಕೆ ಹೆದರಿದ ವಿದ್ಯಾರ್ಥಿಗಳಿಗೆ ದಡ ಸೇರಲು ಸಾಧ್ಯವಾಗದೆ, ನಡು ನದಿಯ ಬಂಡೆಯ ಮೇಲೆಯೇ ಸಿಲುಕಿಕೊಂಡಿದ್ದರು. ನೀರಿನ ಆರ್ಭಟ ಹೆಚ್ಚುತ್ತಿದ್ದಂತೆ ಇಬ್ಬರು ಆತಂಕದಿಂದ ಕಿರುಚಾಡಲು ಆರಂಭಿಸಿದ್ದಾರೆ.
ನಡುನೀರನಲ್ಲಿ ಸಿಲುಕಿದ ಯುವಕರನ್ನು ಕಂಡು ತಕ್ಷಣವೇ ಸ್ಥಳೀಯರು ಹಾಗೂ ಇತರ ಪ್ರವಾಸಿಗರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಉಕ್ಕಿ ಹರಿಯುತ್ತಿದ್ದ ನೀರಿನ ರಭಸವನ್ನೂ ಲೆಕ್ಕಿಸದೆ ಹಗ್ಗ ಹಾಗೂ ಲೈಫ್ ಜಾಕೆಟ್‌ಗಳ ಸಹಾಯದಿಂದ ಸಾಹಸಮಯ ಕಾರ್ಯಾಚರಣೆ ನಡೆಸಿದ್ದಾರೆ. ಕೊನೆಗೂ ಇಬ್ಬರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಇಸ್ರೋ ಕಚೇರಿಗೆ ಮತ್ತೆ ಹುಸಿ ಬಾಂಬ್ ಬೆದರಿಕೆ!



















