ಬೆಂಗಳೂರು : ಸ್ವಯಂ ಉದ್ಯೋಗದ ಕನಸು ಕಾಣುತ್ತಿರುವ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರು ಮತ್ತು ಮಹಿಳೆಯರಿಗೆ ರುಡ್‌ಸೆಟ್ ಸಂಸ್ಥೆ ಮತ್ತೊಮ್ಮೆ ಉತ್ತಮ ಅವಕಾಶ ಕಲ್ಪಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿರುವ ರುಡ್‌ಸೆಟ್ ಸಂಸ್ಥೆಯು ಸಂಪೂರ್ಣ ಉಚಿತವಾಗಿ ಫಾಸ್ಟ್ ಫುಡ್ ಸ್ಟಾಲ್ ಉದ್ಯಮ, ಅಣಬೆ ಬೇಸಾಯ ಹಾಗೂ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ಸೇರಿ ಮೂರು ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ತರಬೇತಿಯೊಂದಿಗೆ ಉದ್ಯಮ ಆರಂಭಿಸಲು ಅಗತ್ಯವಾದ ಮಾರ್ಗದರ್ಶನವನ್ನೂ ಸಂಸ್ಥೆ ನೀಡಲಿದೆ.
‘ಫಾಸ್ಟ್ ಫುಡ್ ತಯಾರಿಕೆ’ ತರಬೇತಿಯೂ ಇದೇ ಬರುವ ಜುಲೈ 9ರಿಂದ ಆರಂಭವಾಗಲಿದ್ದು, 12 ದಿನಗಳ ಕಾಲ ನಡೆಯಲಿದೆ. ಈ ತರಬೇತಿಯಲ್ಲಿ ವಿವಿಧ ಫಾಸ್ಟ್ ಫುಡ್ ತಯಾರಿಕೆ, ಆಹಾರ ಸುರಕ್ಷತೆ, ಗ್ರಾಹಕರ ನಿರ್ವಹಣೆ ಹಾಗೂ ಸ್ವಂತ ಫಾಸ್ಟ್ ಫುಡ್ ಬ್ಯುಸ್ನೆಸ್ ಆರಂಭಿಸುವ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಕಡಿಮೆ ಬಂಡವಾಳದಲ್ಲಿ ಉದ್ಯಮ ಆರಂಭಿಸಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಅಣಬೆ ಬೇಸಾಯ ತರಬೇತಿಯು ಜುಲೈ 21ರಿಂದ ಆರಂಭವಾಗಲಿದ್ದು, 10 ದಿನಗಳ ಕಾಲ ನಡೆಯಲಿದೆ. ಈ ತರಬೇತಿಯಲ್ಲಿ ಅಣಬೆ ಉತ್ಪಾದನೆ, ನಿರ್ವಹಣೆ, ರೋಗ ನಿಯಂತ್ರಣ, ಕೊಯ್ಲು, ಪ್ಯಾಕಿಂಗ್ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಕೃಷಿಯ ಜೊತೆಗೆ ಹೆಚ್ಚುವರಿ ಆದಾಯ ಗಳಿಸಲು ಅಥವಾ ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ ಈ ತರಬೇತಿ ಸಹಕಾರಿಯಾಗಲಿದೆ.

ಇನ್ನು, ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿ ಇದೇ ಜುಲೈ 13ರಿಂದ ಆರಂಭವಾಗಲಿದ್ದು, 35 ದಿನಗಳ ಕಾಲ ನಡೆಯಲಿದೆ. ಬ್ಯೂಟಿ ಥೆರಪಿ, ಹೇರ್ ಕೇರ್, ಮೇಕಪ್, ಸ್ಕಿನ್ ಕೇರ್, ಪಾರ್ಲರ್ ನಿರ್ವಹಣೆ ಸೇರಿದಂತೆ ಆಧುನಿಕ ಸೌಂದರ್ಯ ಸೇವೆಗಳ ಬಗ್ಗೆ ಸಮಗ್ರ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಬ್ಯೂಟಿ ಕ್ಷೇತ್ರದಲ್ಲಿ ವೃತ್ತಿ ಕಟ್ಟಿಕೊಳ್ಳಲು ಅಥವಾ ಸ್ವಂತ ಪಾರ್ಲರ್ ಆರಂಭಿಸಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಈ ಮೂರು ತರಬೇತಿಗಳಿಗೆ 18 ರಿಂದ 50 ವರ್ಷದೊಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದು. ಹಾಗೆಯೇ ತರಬೇತಿ ಅವಧಿಯಲ್ಲಿ ಊಟ ಹಾಗೂ ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಕನ್ನಡ ಓದು-ಬರಹ ಬಲ್ಲವರಿಗೆ ಆದ್ಯತೆ ನೀಡಲಾಗಿದ್ದು, ಬಿಪಿಎಲ್ ಕಾರ್ಡ್ ಅಥವಾ ನರೇಗಾ ಜಾಬ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ 9481506564, 9481778047 ಹಾಗೂ 9241482541 ಸಂಖ್ಯೆಗಳಿಗೆ ಸಂಪರ್ಕಿಸಬಹುದು.
ಇದನ್ನೂ ಓದಿ : ಜಿಲ್ಲಾ ನ್ಯಾಯಾಲಯದಲ್ಲಿ 61 ಟೈಪಿಸ್ಟ್ ಹುದ್ದೆಗಳ ನೇಮಕಾತಿ : ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾಗಿದ್ದರೂ ಸಾಕು



















