ಬೆಂಗಳೂರು : ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯದ ಮೊದಲ ದಿನವೇ ಉತ್ತಮ ಪ್ರಗತಿ ದಾಖಲಾಗಿದೆ. ಜುಲೈ 1ರ ಸಂಜೆ 6 ಗಂಟೆಯವರೆಗೆ ಒಟ್ಟು 54,68,607 ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದ್ದು, ಇದು ರಾಜ್ಯದ ಒಟ್ಟು 5,54,32,314 ಮತದಾರರ ಪೈಕಿ 9.87 ಶೇಕಾಡ ಆಗಿದೆ.

ಮತದಾರರ ಗಣತಿ ನಮೂನೆಗಳ ಮುದ್ರಣ ಹಾಗೂ ಬಿಎಲ್‌ಒಗಳಿಗೆ ವಿತರಣೆಯನ್ನು ಸಂಪೂರ್ಣಗೊಳಿಸಲಾಗಿದೆ. ಮನೆ-ಮನೆ ಭೇಟಿ ಮೂಲಕ ಸಂಗ್ರಹವಾಗುತ್ತಿರುವ ಮಾಹಿತಿಯ ಡಿಜಿಟಲೀಕರಣವೂ ಆರಂಭಗೊಂಡಿದ್ದು, ಮೊದಲ ದಿನವೇ 2,38,453 ನಮೂನೆಗಳು (0.43%) ಡಿಜಿಟಲ್ ರೂಪಕ್ಕೆ ಪರಿವರ್ತನೆಯಾಗಿವೆ. ಇದೇ ವೇಳೆ 26,213 ಮತದಾರರು (0.05%) ಆನ್‌ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ.
ಪರಿಶೀಲನೆ ವೇಳೆ ಒಟ್ಟು 2,565 ವಿಶೇಷ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ 1,383 ಮೃತ ಮತದಾರರು, 816 ಶಾಶ್ವತವಾಗಿ ಸ್ಥಳಾಂತರಗೊಂಡವರು, 327 ಈಗಾಗಲೇ ಬೇರೆ ಕ್ಷೇತ್ರದಲ್ಲಿ ನೋಂದಾಯಿಸಿಕೊಂಡವರು, 21 ಮನೆಗೆ ಭೇಟಿ ವೇಳೆ ಗೈರಾಗಿದ್ದವರು ಹಾಗೂ 18 ಇತರೆ ಪ್ರಕರಣಗಳು ಸೇರಿವೆ.
ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ಬಿಎಲ್‌ಒಗಳು ಹಾಗೂ ಸಿಬ್ಬಂದಿಗೆ ‘ಕರ್ತವ್ಯ’ ಆ್ಯಪ್ ಮೂಲಕ On Other Duty (OOD) ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಮನೆ-ಮನೆ ಸಮೀಕ್ಷೆ ಹಾಗೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ರಾಜ್ಯಾದ್ಯಂತ ನಿರಂತರವಾಗಿ ಮುಂದುವರಿದಿದೆ ಎಂದು ಅಯೋಗ ತಿಳಿಸಿದೆ.
ಇದನ್ನೂ ಓದಿ : ಜಿಬಿಎ ಎಲೆಕ್ಷನ್‌ಗೆ ಸರ್ಕಾರದಿಂದ ಸಕಲ ಸಿದ್ಧತೆ.. ಆಗಸ್ಟ್ 30ರೊಳಗೆ ಚುನಾವಣೆ ನಡೆಸಲು ಕಸರತ್ತು!



















