ಬೆಂಗಳೂರು : ರಾಜ್ಯದಲ್ಲಿ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪನ್ನಗಳ ವಿರುದ್ಧ ಸರ್ಕಾರ ಕಠಿಣ ನಿಲುವು ತಾಳಿದ್ದು, ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ (FSSAI) ರಾಜ್ಯಾದ್ಯಂತ ವಿಶೇಷ ತಪಾಸಣೆ ಆರಂಭಿಸಿದೆ. ಎರಡು ದಿನಗಳ ಮೆಗಾ ಡ್ರೈವ್ ಮೂಲಕ ಪಾನ್-ಗುಟ್ಕಾ ಮಾರಾಟವಾಗುವ ಅಂಗಡಿಗಳಿಂದ ವಿವಿಧ ಬ್ರ್ಯಾಂಡ್‌ಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.

ಈ ಕುರಿತು ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಪಾನ್ ಮಸಾಲಾ ಅಥವಾ ಗುಟ್ಕಾದಲ್ಲಿ ಯಾವುದೇ ಅಮಲಿನ ಅಂಶ ಪತ್ತೆಯಾದರೆ ಅಂತಹ ಉತ್ಪನ್ನಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಎಚ್ಚರಿಕೆ ನೀಡಿದ್ದರು. ಸರ್ಕಾರದ ಗುರಿ ಮಾದಕದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣವಾಗಿದ್ದು, ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಯಾವುದೇ ರಾಜಿ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದರು.

ಸಿಎಂ ಸೂಚನೆಯ ಬೆನ್ನಲ್ಲೇ ಇದೀಗ ಆಹಾರ ಸುರಕ್ಷತಾ ಇಲಾಖೆ ರಾಜ್ಯಾದ್ಯಂತ ತಪಾಸಣೆಯನ್ನು ತೀವ್ರಗೊಳಿಸಿದೆ. ಪಾನ್ ಮಸಾಲಾ ಹಾಗೂ ಗುಟ್ಕಾ ಮಾರಾಟವಾಗುವ ಅಂಗಡಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಅಮಲಿನ ಅಥವಾ ನಿಷೇಧಿತ ಅಂಶಗಳು ಪತ್ತೆಯಾದರೆ ಸಂಬಂಧಿತ ಉತ್ಪನ್ನಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ರಾಜ್ಯದಲ್ಲಿ ನಿಷೇಧ ಹೇರುವ ಸಾಧ್ಯತೆಯೂ ಇದೆ.

ಪರೀಕ್ಷಾ ವರದಿ ಬಂದ ಬಳಿಕ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದ್ದು, ರಾಜ್ಯದಲ್ಲಿ ಪಾನ್-ಗುಟ್ಕಾ ಉತ್ಪನ್ನಗಳ ಭವಿಷ್ಯ ವರದಿಯ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.
ಇದನ್ನೂ ಓದಿ : ಉಡುಪಿ ಸೇರಿ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್.. ಭಾರೀ ಮಳೆಯ ಮುನ್ಸೂಚನೆ!



















