ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕೇವಲ ₹500 ಸಾಲದ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಕಲ್ಲಿನಿಂದ ಹಲ್ಲೆಗೊಳಗಾಗಿದ್ದ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಹುಬ್ಬಳ್ಳಿ ನಗರದ ಯಲ್ಲಾಪುರ ಓಣಿಯ ನಿವಾಸಿ, 45 ವರ್ಷದ ಈರಣ್ಣ ಹುರಕಡ್ಲಿ ಎಂದು ಗುರುತಿಸಲಾಗಿದೆ. ಅವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಜೂನ್ 25ರಂದು ಹುಬ್ಬಳ್ಳಿ ಹೊರವಲಯದಲ್ಲಿ ಈರಣ್ಣ ಹಾಗೂ ಶಶಿಧರ್ ಚನ್ನೋಜಿ ನಡುವೆ ₹500 ಸಾಲದ ವಿಚಾರಕ್ಕೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ತೀವ್ರಗೊಂಡು ಶಶಿಧರ್ ಕಲ್ಲಿನಿಂದ ಈರಣ್ಣನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಈರಣ್ಣ ಅವರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಅವರು ಮೃತಪಟ್ಟಿದ್ದಾರೆ.
ಪ್ರಕರಣ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಶಿಧರ್ ಚನ್ನೋಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಲದ ವಿಚಾರವೇ ಕೊಲೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ : ಟೀಮ್ ಇಂಡಿಯಾದಲ್ಲಿ ವಾಷಿಂಗ್ಟನ್ ಸುಂದರ್ ಸ್ಥಾನದ ಬಗ್ಗೆ ಪ್ರಶ್ನೆ : ಗಂಭೀರ್ ವಿರುದ್ಧ ಹರಿಹಾಯ್ದ ಮಾಜಿ ಕ್ರಿಕೆಟಿಗ!


















