ಬೆಳಗಾವಿ : ಕಲುಷಿತ ಆಹಾರ ಸೇವಿಸಿ ಸುಮಾರು 30 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಮಚ್ಛೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ ನಡೆದಿದ್ದು, ಈ ಹಿನ್ನೆಲೆ ವಿದ್ಯಾರ್ಥಿಗಳು ಹಾಸ್ಟೆಲ್ ಆವರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವಾರ್ಡನ್ ಹಾಗೂ ಸಂಬಂಧಿತ ಅಧಿಕಾರಿಗಳು ಯಾವುದೇ ಕಾಳಜಿ ತೋರಿಲ್ಲ ಎಂದು ಆರೋಪಿಸಿರುವ ವಿದ್ಯಾರ್ಥಿಗಳು, ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾರ್ಡನ್‌ರನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಕೊರತೆಯಿದ್ದು, ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಅತ್ಯಂತ ಕಳಪೆಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಹಲವು ಬಾರಿ ಸಮಸ್ಯೆಗಳನ್ನು ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಘಟನೆಯ ಬಳಿಕವೂ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಯುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಮಚ್ಛೆಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ ತಡರಾತ್ರಿವರೆಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಹಾಸ್ಟೆಲ್ ವ್ಯವಸ್ಥೆ ಸುಧಾರಣೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೆಟ್ಟಿಂಗ್ ಚಟದ ದುರಂತ – ಹೋಂ ಗಾರ್ಡ್ ಪತ್ನಿಯನ್ನು ಕೊಂದು ಪರಾರಿಯಾದ ಪತಿ!


















