ಚಿಕ್ಕಮಗಳೂರು : ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಚಾರ್ಮಾಡಿ ಘಾಟಿಯ ರಸ್ತೆ ಬದಿಯ ತಡೆಗೋಡೆ ಸಮೀಪ ಚಿರತೆ ಕಾಣಿಸಿಕೊಂಡಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಭಾಗದಲ್ಲಿ ಕಾಡು ಪ್ರಾಣಿಗಳ ಸಂಚಾರ ಸಾಮಾನ್ಯವಾಗಿದ್ದರೂ, ರಸ್ತೆ ಬದಿಯಲ್ಲೇ ಚಿರತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಚಾರ್ಮಾಡಿ ಘಾಟಿ ಮೂಲಕ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿದ್ದು, ಪ್ರಕೃತಿ ಸೌಂದರ್ಯ ವೀಕ್ಷಣೆ ಹಾಗೂ ಛಾಯಾಚಿತ್ರ ತೆಗೆಯಲು ಅನೇಕ ಪ್ರವಾಸಿಗರು ವಾಹನಗಳಿಂದ ಇಳಿಯುತ್ತಾರೆ. ಇಂತಹ ಸಂದರ್ಭಗಳಲ್ಲಿ ರಸ್ತೆ ಬದಿಯಲ್ಲೇ ಚಿರತೆ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.
ಅರಣ್ಯ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಚಲನವಲನ ಹೆಚ್ಚಿರುವ ಕಾರಣ, ಪ್ರವಾಸಿಗರು ಅನಗತ್ಯವಾಗಿ ವಾಹನಗಳಿಂದ ಇಳಿಯದಂತೆ ಹಾಗೂ ಸೆಲ್ಫಿ ಅಥವಾ ಫೋಟೋಗಳಿಗಾಗಿ ಪ್ರಾಣಿಗಳ ಸಮೀಪ ಹೋಗದಂತೆ ಎಚ್ಚರಿಕೆ ವಹಿಸಲು ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಸಿಎಂ ವಿಜಯ್ ಕರ್ನಾಟಕ ಪ್ರವಾಸ – ಜೂ.12ರಂದು ಕೊಲ್ಲೂರು ಮೂಕಾಂಬಿಕೆ ಸನ್ನಿಧಾನಕ್ಕೆ ದಳಪತಿ ಭೇಟಿ!


















