ಕೊಪ್ಪಳ : ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಸೇದೋದನ್ನು ಕಲಿಸಿ, ಅದನ್ನೇ ಅಸ್ತ್ರವಾಗಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಬರೋಬ್ಬರಿ 120 ಗ್ರಾಂ ಚಿನ್ನ ದೋಚಿದ ಆಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕುಷ್ಟಗಿ ಪಟ್ಟಣದ ನಿವಾಸಿಗಳಾದ ಬಸವರಾಜ್ ಅಂಗಡಿ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮೊದಲು ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಸೇದೋದನ್ನು ಕಲಿಸಿದ್ದು, ಬಳಿಕ ಅದನ್ನು ವಿಡಿಯೋ ಮಾಡಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ನಂತರ “ಈ ವಿಡಿಯೋವನ್ನು ನಿನ್ನ ತಂದೆ-ತಾಯಿಗೆ ತೋರಿಸುತ್ತೇವೆ” ಎಂದು ಬಾಲಕನಿಗೆ ಬೆದರಿಕೆ ಹಾಕಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದರು. ಆರೋಪಿಗಳ ಬೆದರಿಕೆಗೆ ಹೆದರಿದ ಬಾಲಕ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಹಂತ ಹಂತವಾಗಿ ತೆಗೆದುಕೊಂಡು ಹೋಗಿ ಅವರಿಗೆ ನೀಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ರೀತಿ ಆರೋಪಿಗಳು ಬಾಲಕನಿಂದ ಒಟ್ಟು 120 ಗ್ರಾಂ ಚಿನ್ನವನ್ನು ಪಡೆದುಕೊಂಡಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣಗಳು ಕಾಣೆಯಾಗುತ್ತಿದ್ದ ಹಿನ್ನೆಲೆ ಅನುಮಾನಗೊಂಡ ಪೋಷಕರು ಕುಷ್ಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಕುಷ್ಟಗಿ ಪೊಲೀಸರು, ಪ್ರಕರಣವನ್ನು ಭೇದಿಸಿ ಬಸವರಾಜ್ ಅಂಗಡಿ ಮತ್ತು ನವೀನ್ ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 120 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾವೇ ಬಾಲಕನಿಗೆ ಸಿಗರೇಟ್ ಸೇದೋದನ್ನು ಕಲಿಸಿ, ನಂತರ ಅದೇ ವಿಷಯವನ್ನು ಬಳಸಿಕೊಂಡು ಹಣ ಮತ್ತು ಚಿನ್ನಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಗಳು ಇದೀಗ ಪೊಲೀಸ್ ವಶದಲ್ಲಿದ್ದಾರೆ. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಕುಷ್ಟಗಿ ಪೊಲೀಸ್ ತಂಡದ ಕಾರ್ಯಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಗೃಹಿಣಿ ಆತ್ಮಹತ್ಯೆ!


















