ಬೆಂಗಳೂರು : ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಕುರಿತ ಚರ್ಚೆ ಇನ್ನೂ ಮುಂದುವರಿದಿರುವ ನಡುವೆಯೇ, ಮುಜರಾಯಿ ಇಲಾಖೆಯ ಖಾತೆ ಕುರಿತು ಹೊಸ ಬೇಡಿಕೆ ಕೇಳಿಬಂದಿದೆ. ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಸಂಘವು ಹಿರಿಯ ಶಾಸಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮತ್ತೆ ಮುಜರಾಯಿ ಖಾತೆಯನ್ನೇ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದೆ.

ಒಂದೆಡೆ ಕೆಲ ಸಚಿವರು ತಮಗೆ ಇಷ್ಟದ ಖಾತೆ ನೀಡುವಂತೆ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿರುವಾಗ, ಮತ್ತೊಂದೆಡೆ ಅರ್ಚಕರ ಸಂಘವೇ ನೇರವಾಗಿ ರಾಮಲಿಂಗಾರೆಡ್ಡಿ ಪರ ಬ್ಯಾಟಿಂಗ್ ಮಾಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಮಾತನಾಡಿ, ರಾಮಲಿಂಗಾರೆಡ್ಡಿ ಅವರು ಮುಜರಾಯಿ ಖಾತೆ ನಿರ್ವಹಿಸಿದ ಅವಧಿಯಲ್ಲಿ ದೇವಸ್ಥಾನಗಳ ಅಭಿವೃದ್ಧಿ, ಒತ್ತುವರಿ ತೆರವು, ಅರ್ಚಕರ ಕಲ್ಯಾಣ ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪ್ರಶಂಸಿಸಿದರು. ಯಾವುದೇ ಕಾರಣಕ್ಕೂ ಈ ಖಾತೆಯನ್ನು ಬೇರೆಯವರಿಗೆ ನೀಡಬಾರದು ಎಂದು ಅವರು ಒತ್ತಾಯಿಸಿದರು.
ಅರ್ಚಕರ ಸಂಘದ ಪ್ರಕಾರ, ರಾಜ್ಯದ ಅನೇಕ ಅರ್ಚಕ ಕುಟುಂಬಗಳು ಇನ್ನೂ ಆರ್ಥಿಕ ಸಂಕಷ್ಟದಲ್ಲಿದ್ದು, ಅವರ ಕಲ್ಯಾಣಕ್ಕಾಗಿ ರಾಮಲಿಂಗಾರೆಡ್ಡಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ವಿಶೇಷವಾಗಿ ಸಿ ದರ್ಜೆ ದೇವಸ್ಥಾನಗಳ ಅರ್ಚಕರ ಸಮಸ್ಯೆಗಳ ಪರಿಹಾರಕ್ಕೆ ಅವರು ಸ್ಪಂದಿಸಿದ್ದಾರೆ ಎಂದು ಸಂಘ ಹೇಳಿದೆ.
ಸಂಘಟನಾ ಕಾರ್ಯದರ್ಶಿ ಮಂಜುನಾಥ್ ದೀಕ್ಷಿತ್ ಮಾತನಾಡಿ, “ಹಿಂದೆ ತಸ್ತಿಕ್ ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯ ದೊರೆಯುತ್ತಿರಲಿಲ್ಲ. ಈಗ ಅರ್ಚಕರ ಕುಟುಂಬಗಳಿಗೆ ಹಲವು ಅನುಕೂಲಗಳು ಸಿಕ್ಕಿವೆ. ರಾಮಲಿಂಗಾರೆಡ್ಡಿ ಅವರ ಮೇಲೆ ನಮಗೆ ವಿಶ್ವಾಸ ಮತ್ತು ನಂಬಿಕೆ ಇದೆ” ಎಂದು ಹೇಳಿದರು.
ಜುಲೈ 15ರಿಂದ ಆಗಸ್ಟ್ 15ರವರೆಗೆ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಲು ಸಂಘ ನಿರ್ಧರಿಸಿದೆ. ಈ ಸಮಾವೇಶಗಳ ಮೂಲಕ ಮುಖ್ಯಮಂತ್ರಿ ಅವರಿಗೆ ರಾಮಲಿಂಗಾರೆಡ್ಡಿಗೆ ಮುಜರಾಯಿ ಖಾತೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದೆ.
ಇದೇ ವೇಳೆ, ಮುಂದಿನ ತಿಂಗಳು ರಾಮಲಿಂಗಾರೆಡ್ಡಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲು ಸಂಘ ತೀರ್ಮಾನಿಸಿದ್ದು, ಖಾತೆ ಹಂಚಿಕೆಯಲ್ಲಿ ಅವರ ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ ಅಭಿನಂದನಾ ಸಮಾರಂಭದ ಬದಲು ಹೋರಾಟದ ಹಾದಿ ಹಿಡಿಯಬೇಕಾಗಬಹುದು ಎಂದು ಶ್ರೀವತ್ಸ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ, ಸಚಿವ ಸಂಪುಟ ಖಾತೆ ಹಂಚಿಕೆ ಕುರಿತ ಚರ್ಚೆಗಳು ಮುಂದುವರಿದಿರುವ ಸಂದರ್ಭದಲ್ಲೇ ಮುಜರಾಯಿ ಇಲಾಖೆಯ ಅರ್ಚಕರ ಸಂಘದ ಈ ಬೇಡಿಕೆ ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಕಣ್ಮರೆಯಾದ ಚಿತ್ರರಂಗದ ಧ್ರುವತಾರೆ – ಖ್ಯಾತ ನಿರ್ದೇಶಕ ಭಾರತಿರಾಜ ವಿಧಿವಶ



















