ಕಲಬುರಗಿ : ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ಅಂಚೆ ಇಲಾಖೆ ಕಚೇರಿಯಲ್ಲಿ ಕಳ್ಳತನ ಯತ್ನ ನಡೆದಿದ್ದು, ದುಷ್ಕರ್ಮಿಗಳು ಲಾಕರ್ ಒಡೆಯಲು ವಿಫಲವಾಗಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಚೇರಿಯ ಹಳೆಯ ಲಾಕರ್‌ನಲ್ಲಿ ಸುಮಾರು ₹6 ಲಕ್ಷ ಹಣ ಇರಿಸಲಾಗಿತ್ತು ಎಂದು ತಿಳಿದುಬಂದಿದೆ.
ರಾತ್ರಿ ವೇಳೆ ಕಚೇರಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಖದೀಮರು, ಹಣ ಇದ್ದ ಲಾಕರ್ ಅನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಯತ್ನಿಸಿದ್ದಾರೆ. ಕಬ್ಬಿಣದ ಲಾಕರ್ ಒಡೆಯಲು ಸಾಕಷ್ಟು ಪ್ರಯತ್ನ ನಡೆಸಿದರೂ, ಹಳೆಯ ಕಾಲದ ಗಟ್ಟಿಮುಟ್ಟಾದ ಲಾಕರ್ ಆಗಿದ್ದ ಕಾರಣ ಅವರ ಪ್ರಯತ್ನ ಫಲಿಸಲಿಲ್ಲ.
ಲಾಕರ್ ಅನ್ನು ಹೊತ್ತುಕೊಂಡು ಹೋಗುವ ಪ್ರಯತ್ನವನ್ನೂ ಕಳ್ಳರು ನಡೆಸಿದ್ದಾರೆ ಎನ್ನಲಾಗಿದ್ದು, ಅದರ ತೂಕ ಮತ್ತು ಭದ್ರತೆಯ ಕಾರಣದಿಂದ ಅದನ್ನೂ ಸಾಧ್ಯವಾಗದೆ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕಳ್ಳರು ಕಚೇರಿಯೊಳಗಿನ ದಾಖಲೆಗಳು, ಕಡತಗಳು ಹಾಗೂ ಇತರೆ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಪೊಲೀಸ್ ಠಾಣೆ ಪಕ್ಕದಲ್ಲೇ ಡೀಲ್, ವ್ಯಕ್ತಿಗೆ 70 ಸಾವಿರ ಪಂಗನಾಮ – ಮತ್ತೆ ಕೈಚಳಕ ತೋರಿಸಿದ ಸಿಗ್ಲಿ ಬಸ್ಯಾ!



















